ಕೃಷಿ ಪ್ರಶಸ್ತಿಗೆ ಭಾಜನರಾದ ರೈತರ ಮಕ್ಕಳಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸೇರಿದಂತೆ ಉನ್ನತ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಧಾರವಾಡ: ಕೃಷಿ ಪ್ರಶಸ್ತಿಗೆ ಭಾಜನರಾದ ರೈತರ ಮಕ್ಕಳಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸೇರಿದಂತೆ ಉನ್ನತ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಕೃಷಿ ವಿಶ್ವವಿದ್ಯಾಲಯದ ನೂತನ ಯೋಜನೆಗಳಿಗೆ ಚಾಲನೆ ನೀಡಿ, ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರಧಾನದ ಬಳಿಕ ಮಾತನಾಡಿದ ಮುಖ್ಯಮಂತ್ರಿ, ದುಡಿಯುವ ವರ್ಗದ ಮಕ್ಕಳೂ ವಿದ್ಯೆ ಕಲಿಯಬೇಕು. ಅವರೂ ಗುಡಿಸಲಿನಿಂದ ಹೊರಗೆ ಬರಬೇಕು. ಬದಲಾವಣೆ ಅತ್ಯಂತ ತಳಮಟ್ಟದಿಂದ ಆಗಬೇಕು. ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ರೂಪಿಸಬೇಕು ಎಂದರು.
ರೈತರ ಪರ ವಿಶೇಷ ಬಜೆಟ್: ಈ ಬಾರಿ ರೈತರ ಪರವಾಗಿ ವಿಶೇಷವಾದ ಬಜೆಟ್ ಇರಲಿದೆ. ಗ್ರಾಮೀಣ ಬದುಕು ಹಸನಾಗಬೇಕು. ಅಲ್ಲಿ ಆರ್ಥಿಕತೆ ಬೆಳೆದು ಸಾಮಾಜಿಕವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು. ಕೃಷಿಗೆ ಪೂರಕವಾಗಿರುವ ಇತರೆ ಕಸುಬುದಾರರಿಗೆ ಕಾಯಕ ಯೋಜನೆ ರೂಪಿಸಲಾಗಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿಯೋಜನೆಯನ್ನು ಮುಂದಿನ ವಾರ ಉದ್ಘಾಟಿಸಲಾಗುತ್ತಿದೆ. ಹಾಗೂ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದು ಸ್ವಯಂ ಉದ್ಯೋಗಕ್ಕೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ @BSBommai ಅವರು ಇಂದು ಕೃಷಿ ಇಲಾಖೆ ಹಾಗೂ ಧಾರವಾಡ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯದ ನೂತನ ಯೋಜನೆಗಳಿಗೆ ಚಾಲನೆ ನೀಡಿ, ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿದರು.1/2 pic.twitter.com/U1y3UCuvfn— CM of Karnataka (@CMofKarnataka) January 31, 2023
ಹೊಸ ಪದ್ದತಿಯ ಗೋದಾಮುಗಳ ನಿರ್ಮಾಣಕ್ಕೆ ಚಿಂತನೆ: ಕೃಷಿ ಇನ್ನಷ್ಟು ಉತ್ತಮಗೊಳ್ಳಲು ಸಣ್ಣ ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಪದ್ದತಿಯ ಗೋದಾಮುಗಳನ್ನು ನಿರ್ಮಿಸುವುದಕ್ಕೆ ಸರ್ಕಾರ ಚಿಂತನೆ ಮಾಡುತ್ತಿದೆ. ಈ ಮೂಲಕ ರೈತ ತನ್ನ ಬೆಳೆಗೆ ಬೆಲೆ ಬಂದಾಗ ಮಾರಾಟ ಮಾಡಬಹುದು. ನಮ್ಮ ಸುಗ್ಗಿ ಮಾಡಿದ ನಂತರ ರೈತರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಮೂಲ ಸಮಸ್ಯೆಗೆ ಪರಿಹಾರ : ಕೃಷಿಯಲ್ಲಿ ಆರ್ಥಿಕ ಬದಲಾವಣೆ ತರಲು ಪರಿಣಿತರ ಬಳಿ ಚರ್ಚೆ ಮಾಡುತ್ತಿದ್ದು, ಬರುವ ದಿನಗಳಲ್ಲಿ ಕೃಷಿಗೆ ಇನ್ನಷ್ಟು ಶಕ್ತಿಯನ್ನು ತುಂಬಲಾಗುವುದು. ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದಲ್ಲಿ 46 ಲಕ್ಷ ಜನ ರೈತರಿಗೆ ಕಳೆದ 5 ವರ್ಷಗಳಿಂದ ಅನುದಾನ ಒದಗಿಸಲಾಗುತ್ತಿದ್ದು, ಕೇಂದ್ರದ ಆರು ಸಾವಿರ ರೂ.ಗಳಿಗೆ ರಾಜ್ಯ ಸರ್ಕಾರದ ನಾಲ್ಕು ಸಾವಿರ ಸೇರಿಸಿ ಒಟ್ಟು ಹತ್ತು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ ಮೂಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಅವರು ಹೇಳಿದರು.
ರೈತಶಕ್ತಿ ಯೋಜನೆ ಸರ್ಕಾರದ ದಾಖಲೆಯ ನಿರ್ಣಯ: ಸುಮಾರು 51 ಲಕ್ಷ ರೈತರ ಖಾತೆಗೆ 390 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ರೈತರ ಯಂತ್ರೋಪಕರಣಕ್ಕೆ ಡೀಸೆಲ್ ವೆಚ್ಚವನ್ನು ಸರ್ಕಾರವೇ ಭರಿಸುವ ದಾಖಲೆಯ ಕಾರ್ಯಕ್ರಮ. ಇದೊಂದು ದಾಖಲೆಯ ನಿರ್ಣಯಕ್ಕೆ 500 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಸಿದ್ದು ಸವದಿ, ಅರವಿಂದ ಬೆಲ್ಲದ್, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ್, ಧಾರವಾಡ ವಿವಿ ಕುಲಪತಿ ಡಾ:ಪಿ.ಎಲ್. ಪಾಟೀಲ್, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.