ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಕೆಟ್ ಫ್ರೆಂಡ್ಲಿ ‘ಇಂದಿರಾ ಕ್ಯಾಂಟೀನ್’ ಗಳ ತೆರಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ. ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಕೆಟ್ ಫ್ರೆಂಡ್ಲಿ ‘ಇಂದಿರಾ ಕ್ಯಾಂಟೀನ್’ ಗಳ ತೆರಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ.
ಸೋಮವಾರವಷ್ಟೇ ವಿವಿಧ ಖಾಸಗಿ ಕ್ಯಾಬ್ ಯೂನಿಯನ್‌ಗಳ ಪ್ರತಿನಿಧಿಗಳು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಭೇಟಿ ಮಾಡಿ, ವಿಮಾನ ನಿಲ್ದಾಣದ ಹೊರಗೆ ಇಂದಿರಾ ಕ್ಯಾಂಟೀನ್ ಗಳ ತೆರೆಯುವಂತೆ ಮನವಿ ಮಾಡಿಕೊಂಡಿದ್ದರು.
ವಿಮಾನ ನಿಲ್ದಾಣದ ಒಳಗೆ ಆಹಾರ ಸಿಗುತ್ತದಾದರೂ, ಆಹಾರ ಪದಾರ್ಥಗಳು ದುಬಾರಿಯಾಗಿದೆ. ಹೀಗಾಗಿ ವಿಮಾನ ನಿಲ್ದಾಣದ ಹೊರಗೆ ಇಂದಿರಾ ಕ್ಯಾಂಟೀನ್ ತೆರೆಯುವಂತೆ ಮನವಿ ಮಾಡಿಕೊಂಡಿದ್ದರು.
ಈ ವೇಳೆ ಸಚಿವರು ವಿಮಾನ ನಿಲ್ದಾಣದ ಹೊರಗೆ ಒಂದು ಅಥವಾ ಎರಡು ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದರು.
ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆದರೆ, ಕೇಲವ ಕ್ಯಾಬ್ ಚಾಲಕರು ಮಾತ್ರವಲ್ಲ, ಇತರರಿಗೂ ಪ್ರಯೋಜನವಾಗಲಿದೆ. ಎಲ್ಲರ ಹಿತದೃಷ್ಟಿಯಿಂದ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಕೈಗೆಟಕುವ ದರದಲ್ಲಿ ಆಹಾರವನ್ನು ಒದಗಿಸಲು ನಾವೂ ಕೂಡ ಬಯಸುತ್ತಿದ್ದೇವೆ. ಕ್ಯಾಂಟೀನ್‌ಗಳ ಸ್ಥಾಪನೆಗೆ ಜಾಗವನ್ನು ಮೀಸಲಿಡಲು ಬಿಬಿಎಂಪಿ ಮೂಲಕ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ರೆಡ್ಡಿ ಹೇಳಿದ್ದರು.
ಈ ನಡುವಲ್ಲೇ ಪ್ರತಿಕ್ರಿಯೆ ನೀಡಿಲುವ ಬಿಬಿಎಂಪಿ, ವಿಮಾನ ನಿಲ್ದಾಣವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಿತಿಯ ಅಡಿಯಲ್ಲಿ ಬರುವುದಿಲ್ಲ. ಆದರೂ, ಹೆಚ್ಚಿನ ಸಂಖ್ಯೆಯ ಜನರು ಪ್ರಯೋಜನ ಪಡೆಯುವುದಾದ್ದರಿಂದ “ಸ್ಪೆಷಲ್ ಕೇಸ್” ಎಂದು ಪರಿಗಣಿಸಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಬಹುದು ಎಂದು ಹೇಳಿದೆ.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಸಂಪರ್ಕಿಸಿದಾಗ, ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸಾರಿಗೆ ಸಚಿವರು ಯಾವುದೇ ಮಾತುಕತೆಗಳನ್ನು ನಡೆಸಿಲ್ಲ. ಸಚಿವರು ಸೂಚನೆ ನೀಡಿದ್ದೇ ಆದರೆ, ಅದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸ್ತುತ ನಿಯಮಗಳ ಪ್ರಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ತೆರೆಯಬಹುದು, ಆದರೆ, ವಿಮಾನ ನಿಲ್ದಾಣವು ಬಿಬಿಎಂಪಿ ಮಿತಿಯಲ್ಲಿ ಬರುವುದಿಲ್ಲ ಎಂದು ತಿಳಿಸಿದರು.
ಹೆಚ್ಚೆಚ್ಚು ಜನರು ಸೇರುವ ಪ್ರದೇಶಗಳಲ್ಲಿ ಕ್ಯಾಂಟೀನ್ ಗಳ ತೆರೆಯಲು ನಮಗೆ ಅನುಮತಿ ಇದೆ. ಕೆಲವು ಆಸ್ಪತ್ರೆಗಳ ಆವರಣದಲ್ಲೂ ಇಂದಿರಾ ಕ್ಯಾಂಟೀನ್ ಗಳ ತೆರೆಯಲು ಚಿಂತನೆಗಳ ನಡೆಸಲಾಗುತ್ತಿದೆ. ಅದೇ ರೀತಿ ವಿಮಾನ ನಿಲ್ದಾಣಗಳಲ್ಲಿಯೂ ಸ್ಥಾಪನೆ ಮಾಡುವಂತೆ ಮನವಿ ಬಂದಿದ್ದೇ ಆದರೆ, ಸ್ಪೆಷಲ್ ಕೇಸ್ ಎಂದು ಪರಿಗಣಿಸಿ ಸ್ಥಾಪಿಸಬೇಕಾಗುತ್ತದೆ ಎಂದು ಹೇಳಿದರು.