Home ಕರ್ನಾಟಕ ಕೆಣಕಿದರೆ ತಕ್ಕ ಶಾಸ್ತಿ: ಉತ್ತರ ಕೊರಿಯಾ ಅಧ್ಯಕ್ಷ ಕಿಮ್‍ಜಾಂಗ್ ಎಚ್ಚರಿಕೆ

ಕೆಣಕಿದರೆ ತಕ್ಕ ಶಾಸ್ತಿ: ಉತ್ತರ ಕೊರಿಯಾ ಅಧ್ಯಕ್ಷ ಕಿಮ್‍ಜಾಂಗ್ ಎಚ್ಚರಿಕೆ

14
0

ಪೋಂಗ್ಯಾಂಗ್ : ನಮ್ಮನ್ನು ಕೆಣಕಿದರೆ ಯಾವುದೇ ಹಿಂಜರಿತವಿಲ್ಲದೆ ಶತ್ರುಗಳಿಗೆ ಮಾರಣಾಂತಿಕ ಪ್ರಹಾರ ನೀಡುವುದಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‍ಜಾಂಗ್ ಉನ್ ಎಚ್ಚರಿಕೆ ನೀಡಿರುವುದಾಗಿ ಸರಕಾರಿ ಸ್ವಾಮ್ಯದ ಕೆಸಿಎನ್‍ಎ ಗುರುವಾರ ವರದಿ ಮಾಡಿದೆ.

ದಕ್ಷಿಣ ಕೊರಿಯಾದಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಸೋಲುಂಟಾಗಿದ್ದು ಅಮೆರಿಕದೊಂದಿಗೆ ನಿಕಟ ಬಾಂಧವ್ಯ ಮತ್ತು ಉತ್ತರ ಕೊರಿಯಾದ ಜತೆಗೆ ಅಂತರ ಕಾಯ್ದುಕೊಳ್ಳುವ ಹಾಲಿ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಅವರ ನಿಲುವನ್ನು ಜನತೆ ತಿರಸ್ಕರಿಸಿದ್ದಾರೆ ಎಂದು ಉತ್ತರ ಕೊರಿಯಾದ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ಭರ್ಜರಿ ಗೆಲುವು ದಾಖಲಿಸಿರುವ ಡೆಮೊಕ್ರಟಿಕ್ ಪಕ್ಷವು ಉತ್ತರ ಕೊರಿಯಾ ಬಗ್ಗೆ ಮೃದುಧೋರಣೆ ಹೊಂದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆದ್ದರೆ ಕೊರಿಯಾ ಪರ್ಯಾಯ ದ್ವೀಪ ಪ್ರದೇಶದಲ್ಲಿ ಕಿಮ್‍ಜಾಂಗ್ ಮೇಲುಗೈ ಪಡೆಯುವ ಸಾಧ್ಯತೆ ಹೆಚ್ಚಿದೆ. ಈ ಮಧ್ಯೆ, ದಕ್ಷಿಣ ಕೊರಿಯಾ ತನ್ನ ಪ್ರಮುಖ ಶತ್ರು ಎಂದು ಘೋಷಿಸಿರುವ ಉತ್ತರ ಕೊರಿಯಾ `0.001 ಮಿಲಿಮೀಟರ್‍ನಷ್ಟು ಭೂಮಿಯನ್ನು ಉಲ್ಲಂಘಿಸಿದರೂ ಯುದ್ಧ ಖಂಡಿತ’ ಎಂದು ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ.

ಬುಧವಾರ `ಕಿಮ್‍ಜಾಂಗ್ ಮಿಲಿಟರಿ ಮತ್ತು ರಾಜಕೀಯ ವಿವಿ’ಗೆ ಭೇಟಿ ನೀಡಿದ್ದ ಕಿಮ್‍ಜಾಂಗ್, ಹಿಂದೆಂದಿಗಿಂತಲೂ ಯುದ್ಧಕ್ಕೆ ಹೆಚ್ಚು ಸಂಪೂರ್ಣವಾಗಿ ಸಿದ್ಧರಾಗುವ ಸಮಯ ಇದೀಗ ಬಂದಿದೆ. ಯುದ್ಧಕ್ಕಾಗಿ ದೃಢವಾಗಿ ಮತ್ತು ಸಂಪೂರ್ಣವಾಗಿ ಸಿದ್ಧರಾಗಿರಬೇಕು ಮತ್ತು ಇದರಲ್ಲಿ ಗೆಲುವು ನಮ್ಮದಾಗಿರಬೇಕು’ ಎಂದು ಹೇಳಿರುವುದಾಗಿ ಕೆಸಿಎನ್‍ಎ ವರದಿ ಮಾಡಿದೆ.

ಇದೇ ಸಂದರ್ಭ ಕಿಮ್‍ಜಾಂಗ್ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್, ಅದರ ಪಕ್ಕದಲ್ಲಿ ಹರಿಯುತ್ತಿರುವ ಹ್ಯಾನ್ ನದಿಯ ನಕ್ಷೆಯನ್ನು ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ಫೋಟೋವನ್ನು ಪತ್ರಿಕೆ ಪ್ರಸಾರ ಮಾಡಿದೆ.

LEAVE A REPLY

Please enter your comment!
Please enter your name here