Home Uncategorized ಕೇಂದ್ರ, ರಾಜ್ಯದಿಂದ ಸಿಗದ ಅನುದಾನ: ಅನಾಥವಾದ ಅಮೃತ ಮಿಶನ್, ತುಂಗಾ ಮೇಲ್ದಂಡೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿ...

ಕೇಂದ್ರ, ರಾಜ್ಯದಿಂದ ಸಿಗದ ಅನುದಾನ: ಅನಾಥವಾದ ಅಮೃತ ಮಿಶನ್, ತುಂಗಾ ಮೇಲ್ದಂಡೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ ಯೋಜನೆ

9
0

ಬೆಂಗಳೂರು, ಫೆ.12: ಅಮೃತ್ ಮಿಷನ್, ತುಂಗಾ ಮೇಲ್ದಂಡೆ ಯೋಜನೆ, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಸೇರಿದಂತೆ ಒಟ್ಟು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರವು ತನ್ನ ಪಾಲಿನ ಅನುದಾನದಲ್ಲಿ ಬಿಡಿಗಾಸನ್ನೂ ಒದಗಿಸಿಲ್ಲ.

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪೈಕಿ 7 ಕಾರ್ಯಕ್ರಮಗಳಿಗೆ ರಾಜ್ಯ ಸರಕಾರವು 2023-24ನೇ ಸಾಲಿನಲ್ಲಿ 1,221.49 ಕೋಟಿ ರೂ. ಅನುದಾನ ಒದಗಿಸಿಕೊಂಡಿತ್ತು. ಕೇಂದ್ರ ಸರಕಾರವು ಇವೇ ಕಾರ್ಯಕ್ರಮಗಳಿಗೆ 1,917.48 ಕೋಟಿ ರೂ. ಅನುದಾನ ಮೀಸಲಿರಿಸಿತ್ತು. ಆದರೆ, ಈ ಕಾರ್ಯಕ್ರಮಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರವು ಡಿಸೆಂಬರ್ ಅಂತ್ಯಕ್ಕೆ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2024ರ ಜನವರಿ 25ರಂದು ನಡೆದ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳ ಸಭೆಯಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಕುರಿತಾಗಿ ಚರ್ಚೆ ನಡೆದಿದೆ. ಈ ಸಭೆಯಲ್ಲಿ ಮಂಡಿಸಿದ್ದ ಅಂಕಿ ಅಂಶಗಳು ‘The-file.in’ಗೆ ಲಭ್ಯವಾಗಿವೆ.

20 ಇಲಾಖೆಗಳಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರವು 2023-24ನೇ ಸಾಲಿಗೆ 5,980.79 ಕೋಟಿ ರೂ. ಅನುದಾನ ಒದಗಿಸಿಕೊಂಡಿತ್ತು. ಇದರಲ್ಲಿ ಡಿಸೆಂಬರ್ ಅಂತ್ಯಕ್ಕೆ 1,566.76 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಇನ್ನು 4,414.03 ಕೋಟಿ ರೂ.ಗಳನ್ನು ಬಿಡುಗಡೆಗೆ ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.

ಅದೇ ರೀತಿ ರಾಜ್ಯ ಸರಕಾರವು ಇದೇ 20 ಇಲಾಖೆಗಳಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ 2023-24ನೇ ಸಾಲಿಗೆ 9,511.38 ಕೋಟಿ ರೂ. ಅನುದಾನ ಒದಗಿಸಿತ್ತು. ಈ ಪೈಕಿ ಡಿಸೆಂಬರ್ ಅಂತ್ಯಕ್ಕೆ 7,064.03 ಕೋಟಿ ರೂ. ಬಿಡುಗಡೆ ಮಾಡಿದೆ. 2,447.35 ಕೋಟಿ ರೂ.ಗಳನ್ನು ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ.

ಶೂನ್ಯ ಬಿಡುಗಡೆ: ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿನ ಅಮೃತ್ ಮಿಷನ್ ಯೋಜನೆಗೆ ರಾಜ್ಯವು 320.00 ಕೋಟಿ ರೂ., ಕೇಂದ್ರವು 480.00 ಕೋಟಿ ರೂ., ಪ್ರಾಥಮಿಕ ಶಿಲ್ಕು 1,538.35 ಕೋಟಿ ರೂ.ಸೇರಿ ಒಟ್ಟು 2,338.05 ಕೋಟಿ ರೂ. ಒಟ್ಟು ಅನುದಾನವಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಡಿಸೆಂಬರ್ ಅಂತ್ಯಕ್ಕೆ ಬಿಡಿಗಾಸನ್ನೂ ನೀಡಿಲ್ಲ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ರಾಜ್ಯವು 316 ಕೋಟಿ ರೂ., ಕೇಂದ್ರವು 474 ಕೋಟಿ ರೂ., ಪ್ರಾಥಮಿಕ ಶಿಲ್ಕು 355.31 ಕೋಟಿ ರೂ. ಸೇರಿ ಒಟ್ಟು 1,145.31 ಕೋಟಿ ರೂ. ಅನುದಾನ ಲಭ್ಯವಾಗಿಸಿಕೊಂಡಿದೆ. ಇದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರಕಾರವು ತನ್ನ ಪಾಲಿನ ಅನುದಾನದ ಬಿಡುಗಡೆಯಲ್ಲಿ ಶೂನ್ಯ ಸಂಪಾದಿಸಿದೆ.

ಜಲಸಂಪನ್ಮೂಲ ಇಲಾಖೆಯ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಯಲ್ಲಿ (ಇಆರ್‌ಎಂ)ನಲ್ಲಿ ರಾಜ್ಯವು 100 ಕೋಟಿ ರೂ., ಕೇಂದ್ರ ಸರಕಾರವು 250 ಕೋಟಿ ರೂ., ಸೇರಿ ಒಟ್ಟಾರೆ 350 ಕೋಟಿ ರೂ. ಅನುದಾನ ಒದಗಿಸಿಕೊಂಡಿದೆ. ಕೇಂದ್ರ ಮತ್ತು ರಾಜ್ಯವು ಈ ಯೋಜನೆಗೂ ತನ್ನ ಪಾಲಿನಲ್ಲಿ ನಯಾ ಪೈಸೆ ನೀಡಿಲ್ಲ.

ವಸತಿ ಇಲಾಖೆಯ ಪ್ರಧಾನಮಂತ್ರಿ ಆವಾಝ್ ಯೋಜನೆ (ಗ್ರಾಮೀಣ)ಯಲ್ಲಿ ರಾಜ್ಯವು 164 ಕೋಟಿ ರೂ., ಕೇಂದ್ರವು 246 ಕೋಟಿ ರೂ., ಪ್ರಾಥಮಿಕ ಶಿಲ್ಕು 838.10 ಕೋಟಿ ರೂ. ಸೇರಿ ಒಟ್ಟು 1,248.10 ಕೋಟಿ ರೂ. ಅನುದಾನವಿದೆ. ಇಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರಕಾರವು ತನ್ನ ಪಾಲಿನ ಹಣವನ್ನು ನೀಡಿಲ್ಲ.

ನಗರಾಭಿವೃದ್ಧಿ ಇಲಾಖೆಯ ಸ್ವಚ್ಛ ಭಾರತ (ನಗರ) ಯೋಜನೆಗೆ ರಾಜ್ಯವು 90 ಕೋಟಿ ರೂ., ಕೇಂದ್ರವು 200 ಕೋಟಿ ರೂ., ಪ್ರಾಥಮಿಕ ಶಿಲ್ಕು 747.75 ಕೋಟಿ ರೂ. ಅನುದಾನವಿದೆ. ಸ್ವಚ್ಛ ಭಾರತ ಯೋಜನೆಗೂ ಕೇಂದ್ರ ಸರಕಾರವು ಬಿಡಿಗಾಸನ್ನು ನೀಡಿಲ್ಲ. ರಾಜ್ಯವೂ ಇದೇ ಹಾದಿಯನ್ನೇ ಹಿಡಿದಿದೆ. ಜಲಸಂಪನ್ಮೂಲ ಇಲಾಖೆಯಡಿಯಲ್ಲಿ ತುಂಗಾ ಮೇಲ್ದಂಡೆ ಯೋಜನೆಗೆ ರಾಜ್ಯವು 100.49 ಕೋಟಿ ರೂ., ಕೇಂದ್ರ ಸರಕಾರವು 112.46 ಕೋಟಿ ರೂ. ಸೇರಿ ಒಟ್ಟು 212.97 ಕೋಟಿ ರೂ. ಅನುದಾನ ನಿಗದಿಪಡಿಸಿಕೊಂಡಿದೆ. ಇದರಲ್ಲಿಯೂ ಎರಡೂ ಸರಕಾರಗಳು ನಯಾಪೈಸೆಯನ್ನು ನೀಡಿಲ್ಲ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಧಾನಮಂತ್ರಿ ಆದರ್ಶ ಯೋಜನೆಗೆ ಕೇಂದ್ರವು 100 ಕೋಟಿ ರೂ. ನೀಡಿದೆಯಾದರೂ ಡಿಸೆಂಬರ್ ಅಂತ್ಯಕ್ಕೆ ಬಿಡಿಗಾಸು ನೀಡಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ರಾಜ್ಯವು 131 ಕೋಟಿ ರೂ., ಕೇಂದ್ರವು 55 ಕೋಟಿ ರೂ. ಸೇರಿ ಒಟ್ಟಾರೆ 186 ಕೋಟಿ ರೂ. ಅನುದಾನ ನೀಡಬೇಕಿತ್ತು. ಆದರೆ ಡಿಸೆಂಬರ್ ಅಂತ್ಯಕ್ಕೆ ನಯಾಪೈಸೆಯೂ ಬಿಡುಗಡೆಯಾಗಿಲ್ಲ.

LEAVE A REPLY

Please enter your comment!
Please enter your name here