ಬೆಂಗಳೂರು: ವಿಪಕ್ಷ ನಾಯಕ ಎಂಬ ಗೌರವಾನ್ವಿತ ಹುದ್ದೆಯಲ್ಲಿದ್ದು ಶಾಲಾ ಬಾಲಕನಂತೆ ವರ್ತಿಸಬೇಡಿ. ಪ್ರಬುದ್ಧರಾಗಿರಿ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಕಿವಿಮಾತು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಕುರಿತ ಮೀಮ್ಸ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿರುವ ಬಗ್ಗೆ ಆರೋಗ್ಯ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಮಾನ್ಯ ಅಶೋಕರವರೆ, ನೀವು ವಿಪಕ್ಷ ನಾಯಕರೋ.? ಅಥವಾ ನಿಮ್ಮ ಗತಕಾಲದ ಪುಡಾರಿಯ ಭ್ರಮೆಯಿಂದ ನೀವಿನ್ನೂ ಹೊರಗೆ ಬಂದಿಲ್ಲವೋ.? ಅರ್ಥವಾಗುತ್ತಿಲ್ಲ.! ಸಿದ್ದರಾಮಯ್ಯರ ಬಗ್ಗೆ ಪುಡಾರಿಗಳ ರೀತಿ ಮೀಮ್ಸ್‌ಗಳನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡುವ ನಿಮ್ಮನ್ನು ರಾಜ್ಯದ ಜನ ಏನೆಂದುಕೊಳ್ಳಬೇಕು.? ನಿಮಗಲ್ಲದಿದ್ದರೂ ನೀವಿರುವ ಸ್ಥಾನಕ್ಕೆ ಘನತೆ ತರುವಂತೆ ವರ್ತಿಸಬೇಕಲ್ಲವೇ.? ಎಂದು ಪ್ರಶ್ನಿಸಿದ್ದಾರೆ.
ಪುಡಾರಿಗಳಂತೆ ಮೀಮ್ಸ್‌ಗಳನ್ನು ಶೇರ್ ಮಾಡಿ ಅಧಿಕ ಪ್ರಸಂಗತನ ತೋರಿಸಿ ವಿಪಕ್ಷ ನಾಯಕ ಎಂಬ ಹುದ್ದೆಯನ್ನೇ ಹಾಸ್ಯಾಸ್ಪದಕ್ಕೀಡು ಮಾಡುತ್ತಿದ್ದೀರಲ್ಲಾ, ನಿಮ್ಮ ಪ್ರಬುದ್ಧತೆಯ ಮಟ್ಟ ಎಷ್ಟಿರಬಹುದು.?ಅಶೋಕರವರೆ ಆತ್ಮಾವಲೊಕನ ಮಾಡಿಕೊಳ್ಳಿ. ನಿಮ್ಮದು ಸಾಂವಿಧಾನಿಕ ಹುದ್ದೆ ಎಂದು ಹೇಳಿದ್ದಾರೆ.
ಅಶೋಕರವರೆ, ನೀವು ಪುಡಾರಿಗಳಂತೆ ಮೀಮ್ಸ್‌ಗಳನ್ನು ಶೇರ್ ಮಾಡುವ ಬದಲು ಅಧಿವೇಶನ ನಡೆಯುತ್ತಿದೆ, ನಿಮ್ಮ ಮೋದಿ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯವೇ ಆಗಿಲ್ಲವೆಂದರೆ ಅಂಕಿ- ಅಂಶದ ಜೊತೆ ಸದನದಲ್ಲಿ ವಾದ ಮಾಡಿ. ನಿಮ್ಮ ಕೇಂದ್ರ ಸರಕಾರದಿಂದ ನಮ್ಮ ರಾಜ್ಯಕ್ಕೆ ಹಾಗೂ ಕನ್ನಡಿಗರಿಗೆ ಆಗಿರುವ ದ್ರೋಹವನ್ನು ದಾಖಲೆ ಸಮೇತ ನಿಮ್ಮ ಎದೆ ಬಗೆಯುವಂತೆ ವಿವರಿಸಿ ತೋರಿಸುವ ತಾಕತ್ತು ನಮಗಿದೆ. ವಿಪಕ್ಷ ನಾಯಕ ಎಂಬ ಗೌರವಾನ್ವಿತ ಹುದ್ದೆಯಲ್ಲಿದ್ದು ಶಾಲಾ ಬಾಲಕನಂತೆ ವರ್ತಿಸಬೇಡಿ..Be mature.! ಎಂದು ಟ್ವೀಟ್ ಮಾಡಿದ್ದಾರೆ.