ಕುಡಿದು ಬಂದು ಚಿತ್ರಹಿಂಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೊಳಗಾಗುವಂತೆ ಮಾಡಿದ್ದ ಪತ್ನಿ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಪತಿಯೊಬ್ಬ, ಜೈಲಿನಿಂದ ಹೊರಬರುತ್ತಿದ್ದಂತೆಯೇ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಗರದಲ್ಲಿ ನಡೆದಿದೆ. ಬೆಂಗಳೂರು: ಕುಡಿದು ಬಂದು ಚಿತ್ರಹಿಂಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೊಳಗಾಗುವಂತೆ ಮಾಡಿದ್ದ ಪತ್ನಿ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಪತಿಯೊಬ್ಬ, ಜೈಲಿನಿಂದ ಹೊರಬರುತ್ತಿದ್ದಂತೆಯೇ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ಬಲ್ವೀರ್ ಸಿಂಗ್ ಅಲಿಯಾಸ್ ಬಳ್ಳು ಪತ್ನಿಯನ್ನು ಹತ್ಯೆ ಮಾಡಿದ ವ್ಯಕ್ತಿಯಾಗಿದ್ದಾನೆ. ಈತ ಆಗ್ರಾ ಮೂಲದವನಾಗಿದ್ದು, ಅಗ್ರಹಾರ ದಾಸರಹಳ್ಳಿಯಲ್ಲಿ ವಾಸವಾಗಿದ್ದ. ಮದುವೆ ಮಂಟಪಗಳಿಗೆ ಪಾನ್ ಬೀಡಾ ಸರಬರಾಜು ಮಾಡುವ ಕೆಲಸ ಮಾಡಿಕೊಂಡಿದ್ದ.
ಮದ್ಯದ ಅಮಲಿನಲ್ಲಿ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ. ಚಿತ್ರಹಿಂಸೆ ಸಹಿಸಲಾರದೆ ಪತ್ನಿ ಹಾಗೂ ಮಕ್ಕಳು ಆಗ್ರಾಕ್ಕೆ ಹೋಗಿದ್ದರು. ಆದರೂ, ಮನವರಿಕೆ ಮಾಡಿ 2 ಬಾರಿ ನಗರಕ್ಕೆ ತಂದಿದ್ದ. ಇಷ್ಟಾದರೂ ಪತಿಯ ವರ್ತನೆಯಲ್ಲಿ ಬದಲಾವಣೆಗಳು ಕಂಡು ಬರದ ಹಿನ್ನೆಲೆಯಲ್ಲಿ ಪತ್ನಿ 2013 ರಲ್ಲಿ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಬಲ್ವೀರ್ ಗೆ 1 ವರ್ಷಗಳ ಕಾಲ ಶಿಕ್ಷೆಯಾಗಿತ್ತು.
ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಜೈಲಿನಲ್ಲಿದ್ದುಕೊಂಡೇ ಪತ್ನಿ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ಜೈಲಿನಿಂದ ಹೊರಬರುತ್ತಿದ್ದಂತೆಯೇ ಪತ್ನಿ ಮೇಲೆ ಪ್ರೀತಿ ಇರುವಂತೆ ನಾಟಕವಾಡಿದ್ದಾನೆ. ಆಕೆಯ ಮನವೊಲಿಸಿ ನಂತರ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.
ಪ್ರಕಱಣ ಸಂಬಂಧ 71ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎಸ್.ಜ್ಯೋತಿಶ್ರೀ ಅವರು ಆರೋಪಿಗೆ, ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಆರೋಪಿಯು ಸಂತ್ರಸ್ತೆಯ ಪತಿಯಾಗಿದ್ದು, ಅವಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವುದು ಅವನ ಕರ್ತವ್ಯವಾಗಿತ್ತು. ಈ ಪ್ರಕರದಲ್ಲಿ ಆರೋಪಿಯು ಹಿಂದಿನ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ತನ್ನ ಹೆಂಡತಿಯನ್ನು ಕೊಲ್ಲುವ ಉದ್ದೇಶದಿಂದ ಜೈಲಿನಿಂದ ಹೊರಬಂದಿದ್ದಾನೆ. ಇದಲ್ಲದೆ, ಆರೋಪಿ ತನ್ನ ಪತ್ನಿಯನ್ನು ಪ್ರಣಯಕ್ಕೆ ಕರೆದು, ಟಿವಿ ವಾಲ್ಯೂಮ್ ಹೆಚ್ಚಿಸಿ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆಂದು ತಿಳಿಸಿದ್ದಾರೆ.