ವಿರೋಧ ಪಕ್ಷಗಳ ಸದಸ್ಯರ ಧರಣಿ, ಗದ್ದಲದ ನಡುವಲ್ಲೂ ಚರ್ಚೆಯೇ ಇಲ್ಲದೆ 5 ಮಸೂದೆಗಳಿಗೆ ವಿಧಾನಸಭೆ ಬುಧವಾರ ಅಂಗೀಕಾರ ನೀಡಿದೆ. ಬೆಂಗಳೂರು: ವಿರೋಧ ಪಕ್ಷಗಳ ಸದಸ್ಯರ ಧರಣಿ, ಗದ್ದಲದ ನಡುವಲ್ಲೂ ಚರ್ಚೆಯೇ ಇಲ್ಲದೆ 5 ಮಸೂದೆಗಳಿಗೆ ವಿಧಾನಸಭೆ ಬುಧವಾರ ಅಂಗೀಕಾರ ನೀಡಿದೆ.
ಕರ್ನಾಟಕ ಭೂಕಂದಾಯ (ತಿದ್ದುಪಡಿ) ಮಸೂದೆ, ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ, ಸರ್ಕಾರಿ ವ್ಯಾಜ್ಯಗಳ ನಿರ್ವಹಣಾ ಮಸೂದೆ, ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ಸಿವಿಲ್ ಪ್ರೊಸೀಜರ್ ಕೋರ್ಟ್ (ತಿದ್ದುಪಡಿ) ಮಸೂದೆಗೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಕರ್ನಾಟಕ ಭೂಕಂದಾಯ (ತಿದ್ದುಪಡಿ) ಮಸೂದೆ ಕುರಿತು ವಿವರಣೆ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು, ಬಡವರಿಗೆ ಸಂಬಂಧಿಸಿದ ಪ್ರಕರಣಗಳು ನಾನಾ ಕಾರಣಗಳಿಂದ ವಿಳಂಬವಾಗುತ್ತಿದೆ. ಹಾಗಾಗಿ ಆರು ತಿಂಗಳ ಕಾಲಮಿತಿಯೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸರ್ಕಾರ ತಿದ್ದುಪಡಿ ತಂದಿದೆ ಎಂದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಕರ್ನಾಟಕ ಭೂ ಕಂದಾಯ ನಿಯಮ ಸೆಕ್ಷನ್ 35-95 ಅಡಿಯಲ್ಲಿ ಯಾವ ಪ್ರದೇಶಕ್ಕೆ ನಾವು ಮಾಸ್ಟರ್ ಪ್ಲಾನ್ ಮಾಡಲಾಗಿದೆಯೋ, ಆ ಮಾಸ್ಟರ್ ಪ್ಲಾನ್‌ನಲ್ಲಿ ಯಾವ ಉದ್ದೇಶಕ್ಕೆ ಆ ಭೂಮಿ ಬಳಕೆಯಾಗಬೇಕು ಎಂದು ಉಲ್ಲೇಖಿಸಲಾಗಿರುತ್ತದೆಯೋ ಆ ಪ್ರಕಾರ ಯಾವುದೇ ಕೆಲಸಕ್ಕೆ ಆ ಭೂಮಿಯನ್ನು ಬಳಸಬಹುದು. ಹೌಸಿಂಗ್, ಶಾಲೆ, ಕೈಗಾರಿಕೆ ಹೀಗೆ ಯಾವ ಉದ್ದೇಶಕ್ಕೆ ನಾವು ಭೂಮಿಯನ್ನು ಕ್ಲಾಸಿಫಿಕೇಷನ್ ಮಾಡಿದ್ದೇವೆಯೋ, ಈ ಕ್ಲಾಸಿಫಿಕೇಷನ್ ಮಾಡಿದ ಮೇಲೆ ಮತ್ತೆ ಭೂ ಪರಿವರ್ತನೆ ಅಗತ್ಯ ಇಲ್ಲ. ಅಭಿವೃದ್ಧಿ ಕಾಮಗಾರಿಗಳಲ್ಲಿ ಆಗುತ್ತಿರುವ ಅಡೆತಡೆಗಳನ್ನು ನಿವಾರಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಹೇಳಿದರು.
ನೋಂದಣಿ ಮಸೂದೆ ಕುರಿತು ಮಾತನಾಡಿ, ಮೋಸದ ನೋಂದಣಿಯನ್ನು ತಡೆಯುವುದು ಈ ಮಸೂದೆಯ ಉದ್ದೇಶವಾಗಿದೆ. ಅನೇಕ ಅಧಿಕಾರಿಗಳು ಗೊತ್ತಿದ್ದೂ, ತಿಳಿಯದೆ ಇಂತಹ ಕೆಲಸ ಮಾಡುತ್ತಿದ್ದಾರೆ. “ಒಮ್ಮೆ ಮಸೂದೆಯು ಅಂಗೀಕಾರಗೊಂಡರೆ ಆಯಾ ಜಿಲ್ಲೆಯ ನೋಂದಣಿ ಅಧಿಕಾರಿಗೆ ಇಂತಹ ಮೋಸದ ನೋಂದಣಿಯನ್ನು ರದ್ದುಗೊಳಿಸಲು ಅಧಿಕಾರ ಸಿಕ್ಕಂತಾಗುತ್ತದೆ ಎಂದರು.