ಹುಬ್ಬಳ್ಳಿ : ನನ್ನನ್ನು ಚುನಾವಣೆಯಿಂದ ಹಿಂದೆ ಸರಿಸುವ ವ್ಯಕ್ತಿ ಭೂಮಿ ಮೇಲೆ ಹುಟ್ಟಿಲ್ಲ. ಹಿಂದೆ ಸರಿಯುವ ಉಹಾಪೋಹ ಎಲ್ಲವೂ ಸುಳ್ಳು. ಇದೇ ಎಪ್ರಿಲ್ 18 ರಂದು ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ನೆಹರೂ ಮೈದಾನದಲ್ಲಿ ಮಾತನಾಡಿದ ಅವರು, “ನಾನು ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಲ್ಲದೆ, ಎಲ್ಲಾ ಪಕ್ಷದ ಪ್ರಮುಖ ಮುಖಂಡರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಸದ್ಯಕ್ಕೆ ನಾನು ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಪಕ್ಷದಿಂದ ನಿಲ್ಲಬೇಕು ಎಂದರೆ ಅದನ್ನು ನಾನು ಸಾರ್ವಜನಿಕರ ಮುಂದಿಟ್ಟು ನಿರ್ಧಾರ ತಗೆದುಕೊಳ್ಳುತ್ತೇನೆ. ಜನ ಬಯಸಿರುವುದರಿಂದ ರಾಜಕೀಯಕ್ಕೆ ಬಂದಿದ್ದೇನೆ. ಜನರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.
ಸ್ವಾಮೀಜಿ ಮೆರವಣಿಗೆ
ಬೆಂಗಳೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ಇದೇ ಮೊದಲ ನಗರಕ್ಕೆ ಆಗಮಿಸಿದ ಅವರನ್ನು ಭಕ್ತರು ಅದ್ದೂರಿಯಾಗಿ ಸ್ವಾಗತಿಸಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ನಗರದ ನೆಹರೂ ಮೈದಾನದಿಂದ ಮೂರುಸಾವಿರ ಮಠದವರೆಗೆ ಮೆರವಣಿಗೆ ನಡೆಸಿದರು.