ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ 545 ಪಿಎಸ್ಐ ನೇರ ನೇಮಕಾತಿಯಲ್ಲಿನ ಅಕ್ರಮಗಳ ಕುರಿತು ಎಲ್ಲಾ ಆಯಾಗಳಲ್ಲೂ ತನಿಖೆ ನಡೆಸಲು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಶುಕ್ರವಾರ ಆದೇಶಿಸಿದೆ. ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ 545 ಪಿಎಸ್ಐ ನೇರ ನೇಮಕಾತಿಯಲ್ಲಿನ ಅಕ್ರಮಗಳ ಕುರಿತು ಎಲ್ಲಾ ಆಯಾಗಳಲ್ಲೂ ತನಿಖೆ ನಡೆಸಲು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಶುಕ್ರವಾರ ಆದೇಶಿಸಿದೆ.
ಈ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚಿಸಲಾಗಿದೆ. ಹಗರಣ ಕುರಿತ ವರದಿಯನ್ನು ಮೂರು ತಿಂಗಳಲ್ಲಿ ನೀಡುವಂತೆ ಆಯೋಗವನ್ನು ಸರ್ಕಾರ ಕೋರಿದೆ.
2021ರ ಜನವರಿ 21ರಂದು ಪಿಎಸ್ಐಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿತ್ತು. ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆ, ವಿವಿಧ ಹಂತಗಳಲ್ಲಿ ನಡೆದಿರುವ ಅಕ್ರಮಗಳು ಹಾಗೂ ಯಾರೆಲ್ಲಾ ದುರ್ಲಾಭ ಪಡೆದಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮುಂದಿನ ದಿನಗಳಲ್ಲಿ ಪಿಎಸ್‌ಐ ಹುದ್ದೆಯ ನೇರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಯಮಾನುಸಾರ, ಪಾರದರ್ಶಕ ಹಾಗೂ ಲೋಪರಹಿತವಾಗಿ ನಡೆಸಲು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಶಿಫಾರಸು ಮಾಡುವಂತೆ ಆಯೋಗವನ್ನು ಕೋರಲಾಗಿದೆ.
ಸಿಐಡಿ ತಂಡ ಹಾಗೂ ಪೊಲೀಸ್ ನೇಮಕಾತಿ ವಿಭಾಗವು ಆಯೋಗಕ್ಕೆ ಸಮಗ್ರ ಮಾಹಿತಿ, ದಾಖಲೆ ಸಲ್ಲಿಸುವಂತೆ ಸೂಚಿಸಿದೆ.
ಇದೇ ಅಕ್ರಮ ಪ್ರಕರಣದಲ್ಲಿ ಹಿಂದೆ ತನಿಖೆ ನಡೆಸಿದ್ದ ಸಿಐಡಿ ತಂಡವು ಹಲವರನ್ನು ಬಂಧಿಸಿತ್ತು. ಮತ್ತೆ ವಿಚಾರಣಾ ಆಯೋಗದಿಂದ ತನಿಖೆ ಆರಂಭಗೊಳ್ಳಲಿದೆ.