ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕಿಸುವ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಭೂಮಿ ನೀಡಲಿರುವ ರೈತರು ಹಾಗೂ ಭೂ ಮಾಲಿಕರೊಂದಿಗೆ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಸೋಮವಾರ ಸಭೆ ನಡೆಸಿ ಮಾತುಕತೆ ನಡೆಸಿದರು. ಬೆಂಗಳೂರು: ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕಿಸುವ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಭೂಮಿ ನೀಡಲಿರುವ ರೈತರು ಹಾಗೂ ಭೂ ಮಾಲಿಕರೊಂದಿಗೆ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಸೋಮವಾರ ಸಭೆ ನಡೆಸಿ ಮಾತುಕತೆ ನಡೆಸಿದರು.
ಸಭೆಯಲ್ಲಿ ಶಿವಕುಮಾರ್ ಅವರು, ಯೋಜನೆಯಲ್ಲಿ ಭೂಮಿ ಕಳೆದುಕೊಂಡಿರುವವರ ಸಮಸ್ಯೆ ಆಲಿಸಿ, ಅವರ ಸಲಹೆ ಮತ್ತು ಅಭಿಪ್ರಾಯ ಪಡೆದರು. ಈ ವೇಳೆ ಸಮಸ್ಯೆಗಳ ಸುರಿಮಳೆಯೇ ಸುರಿಯಿತು.
ಡಿಕೆ.ಶಿವಕುಮಾರ್ ಅವರಿಗೆ ನೇರವಾಗಿ ಮಾತನಾಡುವ ಅವಕಾಶವನ್ನು 40 ಮಂದಿ ಪಡೆದುಕೊಂಡವರು, ಯೋಜನೆ ಕುರಿತು ತಮ್ಮ ಸಲಹೆ ಹಾಗೂ ಅಭಿಪ್ರಾಯ, ಕುಂದುಕೊರತೆಗಳ ಕುರಿತು ಸಚಿವರೊಂದಿಗೆ ಮಾತುಕತೆ ನಡೆಸಿದರು. ಬೆಂಗಳೂರಿನ ನಿರ್ಣಾಯಕ ಮೂಲಸೌಕರ್ಯ ಯೋಜನೆಗೆ ಭೂಮಿ ಹಂಚಿಕೊಳ್ಳಲು ಸಿದ್ಧರಿದ್ದೇವೆ. ಆದರೆ, ಭೂಮಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಇಲ್ಲವೇ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ನಮ್ಮ ಜೀವನವನ್ನೇ ಹಾಳು ಮಾಡಿದೆ, ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಕೈಬಿಡಿ: ರೈತರ ಆಗ್ರಹ
18 ವರ್ಷಗಳ ಹಿಂದೆ ಯೋಜಿಸಲಾದ 73 ಕಿಮೀ ಯೋಜನೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 67 ಗ್ರಾಮಗಳ ಒಟ್ಟು 1,810 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸೂಚನೆ ನೀಡಿದೆ.
ಯೋಜನೆಗಾಗಿ ಮಾದನಾಯಕನಹಳ್ಳಿಯಲ್ಲಿ ತಮ್ಮ 2 ಎಕರೆ ಭೂಮಿಯನ್ನು ಕಳೆದುಕೊಳ್ಳಲಿರುವ ಗೌತಮ್ ಜೈನ್ ಅವರು ಮಾತನಾಡಿ, ರಾಜಕಾರಣಿಗಳಿಗೆ ಅನುಕೂಲವಾಗುವ ಸಲುವಾಗಿ ರಸ್ತೆಯ ಜೋಡಣೆಯನ್ನು ಏಳು ಬಾರಿ ಬದಲಾಯಿಸಲಾಗಿದೆ. ಸರ್ಕಾರವು ಯೋಜನೆಯನ್ನು ಎಂದಿಗೂ ರದ್ದುಗೊಳಿಸುವುದಿಲ್ಲಯ ಏಕೆಂದರೆ ಅನೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೂಡ 2005 ರಿಂದ ಯೋಜನೆಗೆ ಹತ್ತಿರವಿರುವ ಭೂಮಿಯನ್ನು ಖರೀದಿಸಿದ್ದಾರೆ, ಏಕೆಂದರೆ ರಸ್ತೆ ಪೂರ್ಣಗೊಂಡ ನಂತರ ಈ ಭೂಮಿಯ ಮೌಲ್ಯವು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಯೋಜನೆಗೆ ಸಚಿವರು ಒಪ್ಪಿಗೆ ನೀಡಿದ್ದಾರೆ. ಕಳೆದ 18 ವರ್ಷಗಳಿಂದಲೂ ಯೋಜನೆ ಕುರಿತು ಏನೂ ಮಾಡಲಾಗಿಲ್ಲ. ಹೀಗಾಗಿ ನಮ್ಮ ಜಮೀನುಗಳನ್ನು ಡಿನೋಟಿಫೈ ಮಾಡಲು ಮತ್ತು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡುವಂತೆ 400 ಭೂಮಾಲೀಕರು ಸಹಿ ಮಾಡಿದ ಮನವಿಪತ್ರವನ್ನು ಸಚಿವರಿಗೆ ಸಲ್ಲಿಸಿದ್ದೇವೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪೆರಿಫೆರಲ್ ವರ್ತುಲ ರಸ್ತೆ ಯೋಜನೆ: 6 ಸಾವಿರ ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಸಚಿವ ಕೃಷ್ಣ ಬೈರೇಗೌಡ ಮನವಿ
ಮಾರುತಿ ನಗರದ ಪೆಂಟೆಕೋಸ್ಟಲ್ ಚರ್ಚ್‌ನ ಫಾದರ್ ರೆವರೆಂಡ್ ಪಿ ಜಿ ಥಾಮಸ್ ಮಾತನಾಡಿ, ಸುಮಾರು 500 ಸದಸ್ಯರು ಪ್ರಾರ್ಥನೆಗಾಗಿ ಚರ್ಚ್‌ಗೆ ಹಾಜರಾಗುತ್ತಾರೆ. ಯೋಜನೆಯು ಚರ್ಚ್ ಮೂಲಕ ಹಾದುಹೋಗುತ್ತದೆ. ನೆರವು ನೀಡುವಂತೆ ಮುಖ್ಯಮಂತ್ರಿಗಳು, ಬಿಡಿಎ ಆಯುಕ್ತರನ್ನು ಸಂಪರ್ಕಿಸಿದ್ದೇನೆ. ಸರ್ಕಾರ ನೀಡುವ ಪರಿಹಾರ ಅಥವಾ ಪರ್ಯಾಯ ಭೂಮಿಯಿಂದ ಏನು ಮಾಡಲು ಸಾಧ್ಯ? ಯೋಜನೆ ವೇಳೆ ಚರ್ಚ್ ಮುಟ್ಟದಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ.
ಸಭೆಯಲ್ಲಿ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೆರಿಫೆರಲ್ ರಿಂಗ್ ರಸ್ತೆ ಅಗತ್ಯವಿದ್ದು, ಅದನ್ನು ಕೈಬಿಡುವ ಮಾತಿಲ್ಲ. ಆದರೆ, ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗಾಗಿ ಒಟ್ಟು 2,565.30 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಭೂ ಸ್ವಾಧೀನ ಸೇರಿದಂತೆ ಯೋಜನೆಗೆ .25 ಸಾವಿರ ಕೋಟಿ ವೆಚ್ಚವಾಗಲಿದೆ. 5 ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. 2005ರಲ್ಲಿ ಯೋಜನೆಗೆ ಮೊದಲ ಪ್ರಾಥಮಿಕ ಅಧಿಸೂಚನೆ ಪ್ರಕಟಿಸಲಾಯಿತು. ಆಗಿನಿಂದಲೂ ಒಂದಿಲ್ಲೊಂದು ಕಾರಣದಿಂದ ಯೋಜನೆ ಅನುಷ್ಠಾನ ಸಾಧ್ಯವಾಗಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂನಲ್ಲಿ ಪ್ರಕರಣ ದಾಖಲಾಗಿದ್ದಾಗ 2013ಕ್ಕಿಂತ ಹಿಂದಿನ ಭೂಸ್ವಾಧೀನ ಕಾಯ್ದೆಯಂತೆ ಭೂಮಾಲಿಕರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. ಹೀಗಾಗಿ 2013ರ ಭೂ ಸ್ವಾಧೀನ ಕಾಯ್ದೆಯಂತೆ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೂ, ರೈತರ ಹಿತ ಕಾಪಾಡಲು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸಿ, ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದಲ್ಲಿ ಚರ್ಚಿಸಿ ಹೆಚ್ಚಿನ ಪರಿಹಾರ ನೀಡುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.