ಪ್ಯಾರಿಸ್: ಮಾಜಿ ಅಗ್ರ ರ‍್ಯಾಂಕಿನ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಮುಂಬರುವ ಪ್ಯಾರಿಸ್‌ನಲ್ಲಿ ನಡೆಯುವ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ. ಸರ್ಬಿಯದ ಒಲಿಂಪಿಕ್ಸ್ ಸಮಿತಿಯು ಮಂಗಳವಾರ ಈ ಕುರಿತಂತೆ ಪ್ರಕಟನೆ ಹೊರಡಿಸಿದೆ.
ಎಟಿಪಿ ರ‍್ಯಾಂಕಿಂಗ್ ಪ್ರಕಾರ ನೊವಾಕ್ ಜೊಕೊವಿಕ್ ಹಾಗೂ ಡುಸಾನ್ ಲಾಜೊವಿಕ್ ಷರತ್ತುಗಳನ್ನು ಪೂರೈಸಿದ್ದಾರೆ. ಪ್ಯಾರಿಸ್‌ನಲ್ಲಿ ಈ ವರ್ಷ ನಡೆಯುವ ಸಮ್ಮರ್ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾಗವಹಿಸುವುದಾಗಿ ದೃಢಪಡಿಸಿದ್ದಾರೆ ಎಂದು ಸರ್ಬಿಯದ ಸಮಿತಿಯು ತಿಳಿಸಿದೆ.
ಜೊಕೊವಿಕ್ ತನ್ನ ಯಶಸ್ವಿ ವೃತ್ತಿಜೀವನದಲ್ಲಿ ನಾಲ್ಕು ಒಲಿಂಪಿಕ್ಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ವರ್ಷದ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾಗವಹಿಸುವ ಕುರಿತು ತನ್ನ ಬಯಕೆಯನ್ನು ವ್ಯಕ್ತಪಡಿಸುತ್ತಾ ಬಂದಿದ್ದರು. ತಾನು ಈ ತನಕ ಸಿಂಗಲ್ಸ್ ವಿಭಾಗದಲ್ಲಿ ಗೆಲ್ಲದ ಚಿನ್ನದ ಪದಕ ಜಯಿಸುವ ಕನಸು ಕಾಣುತ್ತಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಅತ್ಯಂತ ಮುಖ್ಯವಾಗಿದೆ. ಒಲಿಂಪಿಕ್ಸ್ ಯಾವಾಗಲೂ ನನ್ನ ಆದ್ಯತೆಯಾಗಿದೆ ಎಂದು ಎಪ್ರಿಲ್‌ನಲ್ಲಿ ಜೊಕೊವಿಕ್ ಹೇಳಿದ್ದರು.
ಬಲ ಮೊಣಕಾಲು ನೋವಿನಿಂದಾಗಿ ಇತ್ತೀಚೆಗೆ ಕಾಸ್ಪರ್ ರೂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯಕ್ಕಿಂತ ಮೊದಲು ಫ್ರೆಂಚ್ ಓಪನ್‌ನಿಂದ ಹಿಂದೆ ಸರಿಯುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು.
ಮೊಣಕಾಲು ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜೊಕೊವಿಕ್ ಟೆನಿಸ್ ಅಂಕಣಕ್ಕೆ ಹಿಂದಿರುಗಲು ನಿರ್ದಿಷ್ಟ ಕಾಲಾವಧಿಯನ್ನು ನೀಡದಿದ್ದರೂ ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ ಎಂದು 2 ವಾರಗಳ ಹಿಂದೆ ದೃಢಪಡಿಸಿದ್ದರು.