ಚಾಮರಾಜನಗರ ಜಿಲ್ಲೆಯ ಬಂಡಿಪುರ ಸಮೀಪದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅರಣ್ಯ ಇಲಾಖೆ ನೊಟೀಸ್ ಜಾರಿ ಮಾಡಿದ್ದು, ತಕ್ಷಣ ಕಟ್ಟಡ ಕಾಮಗಾರಿ… ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಂಡಿಪುರ ಸಮೀಪದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅರಣ್ಯ ಇಲಾಖೆ ನೊಟೀಸ್ ಜಾರಿ ಮಾಡಿದ್ದು, ತಕ್ಷಣ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದೆ.
ನಟ ಗಣೇಶ್ ಅವರು ಗುಂಡ್ಲುಪೇಟೆ ತಾಲ್ಲೂಕು ಹಂಗಳ ಹೋಬಳಿಯ ಜಕ್ಕಹಳ್ಳಿಯ ಸರ್ವೆ ನಂಬರ್ 105 ರಲ್ಲಿ 1 ಎಕರೆ 24 ಗುಂಟೆ ಜಮೀನು ಹೊಂದಿದ್ದು, ಮನೆ ಹಾಗೂ ತೋಟಗಾರಿಕೆ ಉದ್ದೇಶಕ್ಕಾಗಿ ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿದ್ದಾರೆ.
ಇದನ್ನು ಓದಿ: ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ತಂಡಕ್ಕೆ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಶರಣ್ಯಾ ಶೆಟ್ಟಿ ಸೇರ್ಪಡೆ
ಆದರೆ ಅರಣ್ಯ ಸೂಕ್ಷ್ಮ ಪರಿಸರ ವಲಯದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಪರಿಸರ ವಾದಿಗಳು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಂಡಿಪುರ ಹುಲಿಧಾಮ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಅವರು ಗಣೇಶ್ ಅವರಿಗೆ ನೊಟೀಸ್ ಜಾರಿಗೊಳಿಸಿದ್ದಾರೆ.
ಕಟ್ಟಡ ನಿರ್ಮಿಸುತ್ತಿರುವ ಸ್ಥಳ ಸೂಕ್ಷ್ಮ ಪರಿಸರ ವಲಯದಲ್ಲಿದೆ. ಇಲ್ಲಿ ಕಟ್ಟಡ ನಿರ್ಮಿಸಲು ಯಾವ ಅನುಮತಿ ಪಡೆದಿದ್ದೀರಿ, ಯಾವ ಉದ್ದೇಶಕ್ಕೆ ಕಟ್ಟಡ ನಿರ್ಮಾಣವಾಗುತ್ತಿದೆ ಎನ್ನುವ ವಿವರಣೆಯನ್ನು ನೀಡುವಂತೆಯೂ ಗಣೇಶ್ ಅವರಿಗೆ ಸೂಚಿಸಲಾಗಿದೆ.
ನಟ ಗಣೇಶ್ ಅವರು 2023ರ ಮಾರ್ಚ್ 15ರಂದು ವಾಸ ಹಾಗೂ ಕೃಷಿ ಉಪಕರಣಗಳನ್ನು ಇರಿಸಲು ಮನೆ ನಿರ್ಮಿಸಲು ಅನುಮತಿ ನೀಡಬೇಕು ಎಂದು ಕೋರಿದ್ದರು. ಜಮೀನಿನಲ್ಲಿ ಸ್ವಂತ ಉಪಯೋಗಕ್ಕೆ ತಾತ್ಕಾಲಿಕ ಮನೆ ನಿರ್ಮಿಸಲು ಬಂಡೀಪುರ ನಿರ್ದೇಶಕರು ಅನುಮತಿ ನೀಡಿದ್ದಾರೆ. ಅನುಮತಿಗಿಂತ ಹೆಚ್ಚು ಜಾಗದಲ್ಲಿ ಮನೆ ನಿರ್ಮಿಸುವಂತಿಲ್ಲ. ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಿಸುವಂತಿಲ್ಲ ಎಂಬ ಷರತ್ತನ್ನೂ ಹಾಕಿದ್ದರು. ಆದರೆ ಸ್ಥಳದಲ್ಲಿ ದೊಡ್ಡ ಕಾಂಕ್ರೀಟ್ ಪಿಲ್ಲರ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಮೇಲ್ನೋಟಕ್ಕೆ ಬೃಹತ್ ಶಾಶ್ವತ ಕಟ್ಟಡ ನಿರ್ಮಿಸುವಂತೆ ಕಾಣಿಸುತ್ತಿದೆ. ಹೀಗಾಗಿ ಪರಿಸರವಾದಿಗಳು, ಅರಣ್ಯ ಇಲಾಖೆ ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದರು.