ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಡಿಯಲ್ಲಿ 2019-20 ಮತ್ತು 2022-23 ರ ಹಣಕಾಸು ವರ್ಷಗಳ ನಡುವೆ ಅನುಷ್ಠಾನಗೊಂಡ ಯೋಜನೆಗಳು ಮತ್ತು ಕಾರ್ಯಕ್ರಮಗಳ ಸಂಪೂರ್ಣ ತನಿಖೆ ನಡೆಸಲು ಐಎಎಸ್ ಅಧಿಕಾರಿಗಳ ನೇತೃತ್ವದ 4 ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ. ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಡಿಯಲ್ಲಿ 2019-20 ಮತ್ತು 2022-23 ರ ಹಣಕಾಸು ವರ್ಷಗಳ ನಡುವೆ ಅನುಷ್ಠಾನಗೊಂಡ ಯೋಜನೆಗಳು ಮತ್ತು ಕಾರ್ಯಕ್ರಮಗಳ ಸಂಪೂರ್ಣ ತನಿಖೆ ನಡೆಸಲು ಐಎಎಸ್ ಅಧಿಕಾರಿಗಳ ನೇತೃತ್ವದ 4 ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿ ನಡೆಯದೆ ಬಿಲ್ ಪಾವತಿ, ಟೆಂಡರ್ ನೀಡುವಲ್ಲಿ ಕೆಟಿಪಿಪಿ ಉಲ್ಲಂಘನೆ, ಗುಣಮಟ್ಟ ಕಾಯ್ದುಕೊಳ್ಳದಿರುವುದು ಮತ್ತು ಅನುಮೋದನೆಗೊಂಡ ಕಾಮಗಾರಿಗಳನ್ನು ನಿರ್ವಹಿಸಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ವಿಶೇಷ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಇದೀಗ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ನಗರಾಭಿವೃದ್ಧಿ ಇಲಾಖೆಯು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ್ದು, 30 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ನಿವೃತ್ತ ಮುಖ್ಯ ಎಂಜಿನಿಯರ್ ಕ್ಯಾಪ್ಟನ್ ಆರ್ ಆರ್ ದೊಡ್ಡಿಹಾಳ್, ಬಸವರಾಜ ಕೋಟಿ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಟಿ ಪ್ರಭಾಕರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಪ್ರಮುಖ ರಸ್ತೆ ಕಾಮಗಾರಿಗಳಲ್ಲಿ ಆಪಾದಿತ ಭ್ರಷ್ಟಾಚಾರ ಮತ್ತು ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಹಾಕಲು ನೀಡಿದ ಅನುಮತಿಗಳನ್ನು ತನಿಖೆ ಮಾಡಲು ಸಮಿತಿಯನ್ನು ಮುನ್ನಡೆಸುತ್ತಾರೆ.
ಇಬ್ಬರು ನಿವೃತ್ತ ಪಿಡಬ್ಲ್ಯುಡಿ ಮುಖ್ಯ ಎಂಜಿನಿಯರ್‌ಗಳಾದ ಪ್ರಭಾಕರ ಡಿ ಹಮ್ಮಿಗೆ ಮತ್ತು ಕೆ ಮೋಹನ್, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ನಿವೃತ್ತ ಪ್ರಧಾನ ವ್ಯವಸ್ಥಾಪಕ ಜ್ವಲೇಂದ್ರ ಕುಮಾರ್ ಮತ್ತು ಇಬ್ಬರು ನಿವೃತ್ತ ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಬಸವರಾಜ ಸೌಂಶಿಮಠ ಮತ್ತು ಎನ್‌ಎಸ್ ಮೋಹನ್ ಸದಸ್ಯರಾಗಿರುತ್ತಾರೆ.
ಡಾ.ಪಿ.ಸಿ.ಜಾಫರ್ ನೇತೃತ್ವದ ಸಮಿತಿಯು ಬಿಬಿಎಂಪಿಯ ನಗರ ಯೋಜನಾ ವಿಭಾಗದಲ್ಲಿ ಪ್ರಮುಖ ಮಳೆನೀರು ಚರಂಡಿಗಳು ಮತ್ತು ವಿನ್ಯಾಸ ಅನುಮೋದನೆಯ ಅಕ್ರಮಗಳ ಬಗ್ಗೆ ಪರಿಶೀಲಿಸುತ್ತದೆ. ಇದು ನಿವೃತ್ತ ಇಐಸಿಆರ್ ಕಾರ್ಯದರ್ಶಿ ಎಸ್ ಬಿ ಸಿದ್ದಗಂಗಪ್ಪ, ನಿವೃತ್ತ ಪಿಡಬ್ಲ್ಯುಡಿ ಮುಖ್ಯ ಎಂಜಿನಿಯರ್ ಎಚ್ ಆರ್ ರಾಮಕೃಷ್ಣ ಮತ್ತು ನಿವೃತ್ತ ಪಿಡಬ್ಲ್ಯುಡಿ ಕಾರ್ಯಪಾಲಕ ಎಂಜಿನಿಯರ್ ಮಲ್ಲೇಶ್ ಸದಸ್ಯರಾಗಿರುತ್ತಾರೆ.
ಡಾ.ವಿಶಾಲ್ ಆರ್ ನೇತೃತ್ವದ ನಾಲ್ಕನೇ ಸಮಿತಿಯು ಕೆರೆ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಮತ್ತು ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ತನಿಖೆ ನಡೆಸಲಿದೆ.
ಈ ಸಮಿತಿಯಲ್ಲಿ ನಿವೃತ್ತ ಪಿಡಬ್ಲ್ಯುಡಿ ಮುಖ್ಯ ಎಂಜಿನಿಯರ್ ಬೀಸೇಗೌಡ, ಮೂವರು ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಎಚ್‌ಪಿ ಪ್ರಕಾಶ್, ಶ್ರೀಕಾಂತ್, ಎಚ್ ಕುಮಾರ್ ಮತ್ತು ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ ಎಸ್ ಗೋಪಿನಾಥ್ ಐವರು ಸದಸ್ಯರಾಗಿರುತ್ತಾರೆ.