Home ನಗರ ಬೆಂಗಳೂರಿನಲ್ಲಿ ರಸ್ತೆಗಿಳಿದ ಓಲೆಕ್ಟಾ ಎಲೆಕ್ಟ್ರಿಕ್ ಬಸ್; ಲಕ್ಷ್ಮಣ ಸವದಿ ಹಸಿರು ನಿಶಾನೆ

ಬೆಂಗಳೂರಿನಲ್ಲಿ ರಸ್ತೆಗಿಳಿದ ಓಲೆಕ್ಟಾ ಎಲೆಕ್ಟ್ರಿಕ್ ಬಸ್; ಲಕ್ಷ್ಮಣ ಸವದಿ ಹಸಿರು ನಿಶಾನೆ

36
0
Representational Image

ಬೆಂಗಳೂರು:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದೇಶಿಯ ನಿರ್ಮಿತ ಓಲೆಕ್ಟಾ ಎಲೆಕ್ಟ್ರಿಕ್ ಬಸ್ ಪರೀಕ್ಷಾರ್ಥ ಸಂಚಾರಕ್ಕೆ ಗುರುವಾರ ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಸಿರು ನಿಶಾನೆ ತೋರಿದರು.

ಬಳಕೆಗೂ ಮುನ್ನ ಲಭ್ಯತೆ ಆಯ್ಕೆ ಮತ್ತು ತಂತ್ರಜ್ಞಾನದ ಅರಿವಿಗೆ ಅನುವಾಗುವಂತೆ ಹವಾನಿಯಂತ್ರಿತ ಓಲೆಕ್ಟಾ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರವು ಭಾರೀ ಕೈಗಾರಿಕೆ ಇಲಾಖೆಯ ಮೂಲಕ ಒಪೆಕ್ಸ್ ಮಾದರಿಯಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ನಿಯೋಜಿಸಲು ರಾಜ್ಯ ಸರ್ಕಾರಕ್ಕೆ, ಸರ್ಕಾರಿ ಸಂಸ್ಥೆಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ಒದಗಿಸಲು ಫೇಮ್-2 ಬೇಡಿಕೆ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ಭಾರೀ ಕೈಗಾರಿಕಾ ಇಲಾಖೆಯು ಒಂದು ಬಸ್ಸಿಗೆ 55 ಲಕ್ಷ ರೂ.ಗಳಷ್ಟು ಪ್ರೋತ್ಸಾಹ ಧನ ನೀಡಲಿದೆ. ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆ ಇಲಾಖೆಯು ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್ ಗಳನ್ನು ಕಾರ್ಯಾಚರಣೆ ವೆಚ್ಚದ ಆಧಾರದ ಮೇಲೆ ಫೇಮ್ -2ಯೋಜನೆಯಡಿಯಲ್ಲಿ ಮಂಜೂರಾತಿ ನೀಡಿದೆ. ರಾಜ್ಯ ಸರ್ಕಾರವು 2020-21ನೇ ಸಾಲಿನ ಆಯವ್ಯಯದಲ್ಲಿ ಫೇಮ್ 2 ಅಡಿಯಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರವು 500 ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆಗೆ 100 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ನೀಡಲು ಅನುಮೋದನೆ ನೀಡಿದೆ ಎಂದರು.

BMTC electic bus1

ಭಾರೀ ಕೈಗಾರಿಕಾ ಇಲಾಖೆಯು ಫೇಮ್ 2 ಯೋಜನೆಯಡಿಯಲ್ಲಿ ಪ್ರತಿ ಬಸ್ ಗೆ ನೀಡುವ 55 ಲಕ್ಷ ರೂ. ಮತ್ತು ರಾಜ್ಯ ಸರ್ಕಾರವು ಆಯವ್ಯಯದಲ್ಲಿ ಘೋಷಿಸಿರುವ 100 ಕೋಟಿ ರೂ.ಗಳ (ಪ್ರತಿ ಬಸ್ಸಿಗೆ 33.33 ಲಕ್ಷ ) ಆರ್ಥಿಕ ಸಹಾಯವನ್ನು ಸಂಯೋಜಿಸಿಕೊಂಡು ಪ್ರತಿ ಬಸ್ಸಿಗೆ ರೂ.88.33 ಲಕ್ಷಗಳಂತೆ (55 ಲಕ್ಷ ಮತ್ತು 33.33 ಲಕ್ಷ) ಪ್ರೋತ್ಸಾಹಧನದೊಂದಿಗೆ ಫೇಮ್ 2 ಯೋಜನೆಯಡಿಯಲ್ಲಿ 300 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆ ಮಾಡಲು ಹೊಸ ಟೆಂಡರ್ ಕರೆಯಲು ರಾಜ್ಯ ಸರ್ಕಾರ ಅನುಮತಿ ಕೋರಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಯಾವುದೇ ವೆಚ್ಚವನ್ನು ಭರಿಸದೆ ಷರತ್ತಿಗೊಳಪಟ್ಟು ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಮೋದಿಸಲು ಸಹಮತಿಸಿದೆ. ಭಾರೀ ಕೈಗಾರಿಕೆ ಇಲಾಖೆಯು ಫೇಮ್ -2 ಯೋಜನೆಯಡಿ ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆಗೆ ಸರಬರಾಜು ಆದೇಶವನ್ನು 2020, ಡಿಸೆಂಬರ್ 31ರೊಳಗಾಗಿ ನೀಡಲು ತಿಳಿಸಿದೆ ಎಂದು ಸಚಿವರು ತಿಳಿಸಿದರು.

BMTC electic bus2

ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ 12 ಮೀಟರ್ ಉದ್ದವಿದ್ದು, 400 ಮೀಟರ ಫ್ಲೋರ್ ಎತ್ತರವಿದೆ. 34+1 ಪ್ರಯಾಣಿಕರ ಆಸನವನ್ನು ಹೊಂದಿದೆ. ಆಟೋ ಮ್ಯಾಟಿಕ್ ಗೇರ್ ವ್ಯವಸ್ಥೆಯಿದ್ದು, ಮುಂಬದಿ ಮತ್ತು ಹಿಂಬದಿ ಡಿಸ್ಕ್ ಬ್ರೇಕ್ ಒಳಗೊಂಡಂತೆ ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆನ್ಸ್ ಹೊಂದಿದೆ.

ಬಿಎಂಟಿಸಿ ಪ್ರಾಯೋಗಿಕವಾಗಿ ಚಾಲನೆಗೊಳಪಡಿಸಿದ ಓಲೆಕ್ಟಾ ಎಲೆಕ್ಟ್ರಿಕ್ ಬಸ್ 12 ಮೀಟರ್ ಉದ್ದದ 400 ಮೀಟರ್ ಎತ್ತರದ ಬಸ್ ಆಗಿದ್ದು, ಆಟೋಮೆಟಿಕ್ ಗೇರ್ ವ್ಯವಸ್ಥೆಯನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ ಹವಾನಿಯಂತ್ರಣದೊಂದಿಗೆ ಟ್ರಾಫಿಕ್ ದಟ್ಟಣೆ ನಡುವೆ ಓಲೆಕ್ಟಾ 200ರಿಂದ 250 ಕಿಮೀ ಸಂಚರಿಸಲು ಶಕ್ತವಾಗಿದೆ.

ಒಮ್ಮೆಗೆ 100ರಿಂದ 125 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯದ ಓಲೆಕ್ಟಾಗೆ ಪದೇ ಪದೇ ಚಾರ್ಜಿಂಗ್ ಅಗತ್ಯವಿಲ್ಲದ ಪರಿಣಾಮ ಈ ಬಸ್ ಸೇವೆ ಬಿಎಂಟಿಸಿಗೆ ಲಾಭ ಸಾಬೀತಾಗಲಿದ್ದು, ಹಿರಿಯ ನಾಗರೀಕರಿಗೆ ವ್ಹೀಲ್ ಚೇರ್ ವ್ಯವಸ್ಥೆಯನ್ನೂ ಹೊಂದಿದೆ.

ಹೈಟೆಕ್ ಓಲೆಕ್ಟಾ!

ಸಿಎಂವಿಆರ್ ನಿಬಂಧನೆಗಳಿಗೆ ಅನುಗುಣವಾಗಿ ನಿರ್ಮಾಣವಾಗಿರುವ ಓಲೆಕ್ಟಾ ಮೊಬೈಲ್‌ಗಳ ಚಾರ್ಜಿಂಗ್‌ಗೆ ಯೂಎಸ್‌ಬಿ ಚಾರ್ಜಿಂಗ್ ಅವಕಾಶ, ಎಮೆರ್ಜೆನ್ಸಿ ಅಲಾರಾಮ್, ನಿಲುಗಡೆ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗಾಜಿನ ಸುತ್ತಿಗೆಗಳು, ತುರ್ತು ನಿರ್ಗಮನಕ್ಕೆ ಅವಕಾಶ ಸೇರಿದಂತೆ ಎಲ್ಲ ಸುರಕ್ಷತಾ ವ್ಯವಸ್ಥೆಯೊಂದಿಗಿನ ಹೈಟೆಕ್ ಬಸ್ ಆಗಿದೆ.

ಅತ್ಯಾಧುನಿಕ ತಂತ್ರಜ್ಞಾನ ದೊಂದಿಗೆ ಬ್ಯಾಟರಿ ತಂತ್ರಜ್ಞಾನ ಹೊರತಾಗಿ ಸಂಪೂರ್ಣ ದೇಶಿಯವಾಗಿ ನಿರ್ಮಿತವಾಗಿರುವ ಓಲೆಕ್ಟಾ ಎಲೆಕ್ಟ್ರಿಕ್ ಬಸ್ ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆನ್ಷನ್ ಹೊಂದಿದೆ ಮತ್ತು ಟ್ರಾಕ್ಷನ್ ಬ್ಯಾಟರಿಯ ಕೂಲೆಂಟ್ ಮೆಕಾನಿಸಂ ಹೊಂದಿರುವ ಲಿ-ಅಯಾನ್‌ದಾಗಿದೆ. ಇದರಿಂದ ಬ್ಯಾಟರಿ ತಾಪಮಾನ ನಿಯಂತ್ರಿಸುವ ಮೂಲಕ ಹೆಚ್ಚಿನ ಮೈಲೇಜ್ ಸಾಧ್ಯವಾಗಲಿದೆ.

ಬಿಎಂಟಿಸಿ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿರುವ ಈ ಎಲೆಕ್ಟ್ರಿಕ್ ಬಸ್ ಪ್ರತಿ ಕಿಮೀಗೆ 1.2ರಿಂದ 1.4 ಕೆಡಬ್ಲ್ಯುಹೆಚ್ ವಿದ್ಯುತ್‌ಚ್ಛಕ್ತಿ ಬಳಸಿಕೊಳ್ಳಲಿದೆ, 2ರಿಂದ 3 ಗಂಟೆಯೊಳಗೆ ಫಾಸ್ಟ್ ಚಾರ್ಜಿಂಗ್ ಮೂಲಕ ಬಸ್ ನಿಗದಿತ ಕಿ.ಮೀ. ಸಂಚರಿಸಲಿದೆ.

ಪ್ರಸ್ತುತ ಓಲೆಕ್ಟಾ ಎಲೆಕ್ಟ್ರಿಕ್ ಬಸ್‌ಗಳು ಹೈದರಾಬಾದ್, ಹೈದರಾಬಾದ್ ವಿಮಾನ ನಿಲ್ದಾಣ ಸೇವೆಗಳು, ಪುಣೆ ಮುಂಬೈ, ಹಿಮಾಚಲ ಪ್ರದೇಶದ ಮನಾಲಿಗಳಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿವೆ.

ಈ ನಗರಗಳಲ್ಲಿ ಸಂಚರಿಸುತ್ತಿರುವ ಬಸ್‌ಗಳಿಗಾಗಿ 19 ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ಕಳೆದ ಎರಡು ವರ್ಷಗಳಿಂದ ಸತತ ಸಂಚರಿಸುತ್ತಿರುವ 300 ಓಲೆಕ್ಟಾ ಎಲೆಕ್ಟ್ರಿಕ್ ಬಸ್‌ಗಳು ಈವರೆಗೆ 3 ಕೋಟಿ ಕೀ.ಮೀ.ಗಳ ಸಂಚಾರವನ್ನು ಯಶಸ್ವಿಯಾಗಿ ಪೂರೈಸಿರುವುದು ಓಲೆಕ್ಟ್ರಾದ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.

ಉತ್ತರಖಾಂಡದ ತಿಲ್ವಾಸ, ಅಸ್ಸಾಂನ ಗೌಹಾತಿ, ಮಧ್ಯಪ್ರದೇಶದ ಇಂದೋರ್, ಸೂರತ್, ಭೊಪಾಲ್, ಜಬಲ್‌ಪುರ್, ಉಜ್ಜಯನಿ ಸೇರಿದಂತೆ ವಿವಿಧೆಡೆ ಸಂಚಾರದ ಅವಕಾಶವನ್ನು ತನ್ನದಾಗಿಸಿಕೊಂಡಿರುವ ಓಲೆಕ್ಟ್ರಾ ಇದಕ್ಕಾಗಿ 800 ಬಸ್‌ಗಳ ನಿರ್ಮಾಣದಲ್ಲಿ ತೊಡಗಿಕೊಂಡಿದೆ ಎಂದು ಓಲೆಕ್ಟಾ ಎಲೆಕ್ಟ್ರಿಕ್ ಗ್ರೀನ್ ಟೆಕ್ ಲಿಮಿಟೆಡ್ ತಿಳಿಸಿದ್ದು, ತಿರುಮಲ ಬೆಟ್ಟ ಪ್ರದೇಶ ಮತ್ತು ಶಬರಿಮಲೆಯಂತಹ ಬೆಟ್ಟ ಪ್ರದೇಶದಲ್ಲಿ ಸಹ ಯಶಸ್ವಿಯಾಗಿ ಕಾರ್ಯಾಚರಿಸುವ ಮೂಲಕ ತನ್ನ ಶ್ರೇಷ್ಠತೆಯನ್ನು ಸಾರಿ ಹೇಳಿದೆ. ಓಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ ಹೈದರಾಬಾದ್‌ನಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಹೊಂದಿದ್ದು, ನಗರ ಸಾರಿಗೆ ಸಂಸ್ಥೆಗಳ ಅಗತ್ಯತೆಗೆ ಅನುಗುಣವಾಗಿ ಬಸ್‌ಗಳನ್ನು ನಿರ್ಮಿಸಿಕೊಡುವ ಅವಕಾಶಗಳನ್ನು ತೆರೆದಿರಿಸಿದೆ.

ತಾಪಮಾನ ಇಳಿಕಗೆ ಸಹಕಾರಿ

ಬೆಂಗಳೂರು ನಗರದ ಬೆಳವಣಿಗೆಯಿಂದ ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ವರ್ಷದಿಂದ ವರ್ಷಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಇದರ ಪರಿಣಾಮ ಭಾರೀ ಪ್ರಮಾಣದ ವಾಯುಮಾಲಿನ್ಯ ಮತ್ತು ಉಷ್ಣಾಂಷದಲ್ಲಿ ಏರಿಕೆ ದಾಖಲಾಗುತ್ತಿದೆ. ಉದಾಹರಣೆಗೆ 2000ದಿಂದ 2008ರವರೆಗೆ ಅತಿ ಹೆಚ್ಚು 28 ಡಿಗ್ರಿ ಸೆಲ್ಷಿಯಲ್ಸ್ ದಾಖಲಾಗಿದ್ದ ಉಷ್ಣಾಂಶ, 2010ರಿಂದ 2020ರ ವೇಳೆಯಲ್ಲಿ ಅತಿ ಹೆಚ್ಚು 39 ಡಿಗ್ರಿ ಸೆಲ್ಷಿಯಲ್ಸ್ ಉಷ್ಣಾಂಶ ದಾಖಲಾಗಿತ್ತು. ಈ ಉಷ್ಣಾಂಶ ಏರಿಕೆ ಎಲ್ಲೆಡೆ ಕಂಡು ಬರುತ್ತಿದ್ದು, ಜಾಗತಿಕ ತಾಪಮಾನ ಏರಿಕೆ ಆತಂಕ ಸೃಷ್ಟಿಸಿದೆ. ಹೀಗಾಗಿ ಎಲ್ಲ ರಾಷ್ಟ್ರಗಳು ಜಾಗತಿಕ ತಾಪಮಾನ ತಗ್ಗಿಸಲು ಮುಂದಡಿ ಇರಿಸಿವೆ. ಜಾಗತಿಕ ತಾಪಮಾನ ಏರಿಕೆಗೆ ಆಟೋಮೊಬೈಲ್ ಮತ್ತು ಕೈಗಾರಿಕೆಗಳ ಪಾತ್ರ ಹೆಚ್ಚಿದ್ದು, ಎಲೆಕ್ಟ್ರಿಕ್ ವಾಹನಗಳ ಮೂಲಕ “ಶೂನ್ಯಮಾಲಿನ್ಯ’ ಸಾಧಿಸಬಹುದಾಗಿದೆ. ಹೀಗಾಗಿ ಭಾರತ ಸರ್ಕಾರವೂ ಸಹ ಶೂನ್ಯ ಮಾಲಿನ್ಯದತ್ತ ಮುಖಮಾಡಿದ್ದು, ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಯೋಜನೆಗಳನ್ನು ರೂಪಿಸಿದೆ.

ಸಮೂಹ ಸಾರಿಗೆಗೆ ಒತ್ತು: ಹೈಟೆಕ್ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿರುವ ಓಲೆಕ್ಟ್ರಾ ಎಲೆಕ್ಟ್ರಿಕ್ ಬಸ್‌ಗಳು ಸಮೂಹ ಸಾರಿಗೆಗೆ ಒತ್ತು ನೀಡಲಿದೆ. ಪರಿಸರ ಸ್ನೇಹಿ ಓಲೆಕ್ಟ್ರಾ ಬಸ್‌ಗಳ ಸಂಚಾರದಿಂದ ನಾಲ್ಕು ಚಕ್ರ ವಾಹನಗಳ ಸಂಚಾರ ಕಡಿಮೆ ಆಗಲಿದೆ ಮತ್ತು ಇಂಧನ ಬಳಕೆಯಲ್ಲಿ ಗಣನೀಯ ಇಳಿಕೆ ಸಾಧ್ಯವಾಗಲಿದೆ. ಕಾರ್ಬನ್ ಅನಿಲಕ್ಕೆ ಕಡಿವಾಣ ಹಾಕಬಹುದಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here