Home ಕರ್ನಾಟಕ ಬೆಂಗಳೂರು | ಅಧಿಕ ಲಾಭಾಂಶ ಕೊಡುವುದಾಗಿ ವಂಚಿಸುತ್ತಿದ್ದ ಡೆವಲಪರ್ಸ್ ಕಂಪೆನಿ ಜಪ್ತಿ : ಪ್ರಕರಣ ದಾಖಲು

ಬೆಂಗಳೂರು | ಅಧಿಕ ಲಾಭಾಂಶ ಕೊಡುವುದಾಗಿ ವಂಚಿಸುತ್ತಿದ್ದ ಡೆವಲಪರ್ಸ್ ಕಂಪೆನಿ ಜಪ್ತಿ : ಪ್ರಕರಣ ದಾಖಲು

9
0

ಬೆಂಗಳೂರು: ಅಧಿಕ ಲಾಭಾಂಶ ಕೊಡುವುದಾಗಿ ವಂಚಿಸುತ್ತಿದ್ದ ಡೆವಲಪರ್ಸ್ ಕಂಪೆನಿಯನ್ನು ಜಪ್ತಿ ಮಾಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಬೆಂಗಳೂರಿನ ವಿಜಯನಗರದಲ್ಲಿರುವ ಅಕ್ಷಯ ಫಾರ್ಟೂನ್ ಡೆವಲಪರ್ಸ್ ಎಂಬ ಹೆಸರಿನ ಡೆವಲಪರ್ಸ್ ಕಂಪೆನಿ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ. ಈ ಕಂಪೆನಿಯಲ್ಲಿ ಸಾರ್ವಜನಿಕರು ಹೂಡಿಕೆ ಮಾಡಿದರೆ ಶೇ.25ರಷ್ಟು ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ 1 ಲಕ್ಷ ಹೂಡಿಕೆ ಮಾಡಿದರೆ 5 ಸಾವಿರದಂತೆ ಹಣ ಕೊಡುವುದಾಗಿ ಕೋಟ್ಯಂತರ ರೂ. ಹಣ ಹೂಡಿಕೆ ಮಾಡಿಸಿಕೊಂಡು ವಂಚಿರುವುದಾಗಿ ತಿಳಿದುಬಂದಿದೆ.

ಇನ್ನೂ ಜನರನ್ನು ಕರೆತಂದು ಚೈನ್ ಲಿಂಕ್‍ನಲ್ಲಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಡೆವಲಪರ್ಸ್ ಕಂಪೆನಿ ಮಾಲಕ ಮುನಿರಾಜು ವಿರುದ್ಧ ಈ ಹಿಂದೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಸಿಸಿಬಿ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿಕೊಂಡು ಕಂಪೆನಿಯನ್ನು ಜಪ್ತಿ ಮಾಡಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣದ ಆರೋಪಿಗಳಾದ ಅಕ್ಷಯ ಫಾರ್ಟೂನ್ ಡೆವಲಪರ್ಸ್ ಮಾಲಕ ಮುನಿರಾಜು ಹಾಗೂ ವ್ಯವಸ್ಥಾಪಕ ಮಂಜು ಪರಾರಿಯಾಗಿದ್ದು, ಸಿಸಿಬಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here