ಇದೇ ವರ್ಷ ಉದ್ಘಾಟನೆಯಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹಲವು ಲೋಪದೋಷಗಳಿದ್ದು, ಅಪಘಾತ ತಡೆಯಲು ಅವುಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ಮಂಗಳವಾರ ಹೇಳಿದರು. ಬೆಂಗಳೂರು: ಇದೇ ವರ್ಷ ಉದ್ಘಾಟನೆಯಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹಲವು ಲೋಪದೋಷಗಳಿದ್ದು, ಅಪಘಾತ ತಡೆಯಲು ಅವುಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ಮಂಗಳವಾರ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಈ ಎಕ್ಸ್ ಪ್ರೆಸ್ ವೇ ನಲ್ಲಿ ಹಲವು ಲೋಪದೋಷಗಳಿವೆ. ಸರಿಯಾದ ಸೂಚನಾ ಫಲಕಗಳಿಲ್ಲ, ವಾಹನ ಸವಾರರು ಅತಿವೇಗದಲ್ಲಿ ಸಂಚರಿಸುತ್ತಾರೆ, ತಿರುವು ಸಮೀಪಿಸಿದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತಿದೆ.ಇತ್ತೀಚೆಗೆ ಎಡಿಜಿಪಿ (ಸಂಚಾರ) ಪರಿಶೀಲನೆ ನಡೆಸಿ ಪರಿಹಾರ ಸೂಚಿಸಿದ್ದಾರೆ ಎಂದರು.
ವೇಗದ ವಾಹನಗಳ ಮೇಲೆ ನಿಗಾ ಇಡಲು ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರತಿ 30 ಕಿ.ಮೀಗೆ ಹೈವೇ ಗಸ್ತು ವಾಹನ ಇರಲಿದೆ. ಈ ತಂಡ ಹೆದ್ದಾರಿಯಲ್ಲಿ ಯಾವುದೇ ವಾಹನ ನಿಲ್ಲಿಸದಂತೆ ನೋಡಿಕೊಳ್ಳುತ್ತದೆ. ವಾಹನ ಚಾಲಕರು ಲೇನ್ ನಿಯಮಗಳನ್ನು ಅನುಸರಿಸುವುದಿಲ್ಲ, ಅದರ ಮೇಲೆ ನಿಗಾ ಇಡಬೇಕು ಎಂದು ಅವರು ಹೇಳಿದರು. ಅಲ್ಲದೆ, ಪಾದಚಾರಿಗಳು ರಸ್ತೆ ದಾಟುತ್ತಾರೆ. ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಇರುವ ತಂತಿ ಬೇಲಿಗಳನ್ನು ಸಹ ಕೆಲವು ಸ್ಥಳಗಳಲ್ಲಿ ತೆಗೆದುಹಾಕಲಾಗಿದೆ, “ಈ ಎಲ್ಲಾ ಸಮಸ್ಯೆಗಳ ಬಗ್ಗೆ ನಾವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಅವರು ಹೇಳಿದರು.
ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ‘ಮಳೆ ಬಂದರೆ ರಸ್ತೆಯಲ್ಲಿ ನೀರು ತುಂಬಿ, ಅಪಘಾತಕ್ಕೂ ಕಾರಣವಾಗುತ್ತಿದೆ ಎಂದು ತಿಳಿಸಿದರು.