ಗ್ರಾಹಕರಿಗೆ ತಲುಪಿಸಬೇಕಿದ್ದ ಐಫೋನ್ ಗಳು, ಸ್ಮಾರ್ಟ್ ವಾಚ್ ಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಡೆಲಿವರಿ ಬಾಯ್’ಗಳನ್ನು ಕೇಂದ್ರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ಗ್ರಾಹಕರಿಗೆ ತಲುಪಿಸಬೇಕಿದ್ದ ಐಫೋನ್ ಗಳು, ಸ್ಮಾರ್ಟ್ ವಾಚ್ ಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಡೆಲಿವರಿ ಬಾಯ್’ಗಳನ್ನು ಕೇಂದ್ರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ರಾಯಚೂರು ನಿವಾಸಿ ಬಸವರಾಜ (26) ಮತ್ತು ಯಾದಗಿರಿಯ ಸುರಪುರ ನಿವಾಸಿ ಮಾಳಪ್ಪ (23) ಬಂಧಿತ ವ್ಯಕ್ತಿಗಳಾಗಿದ್ದಾರೆ.
ಉದ್ಯಮಿಯೊಬ್ಬರು ಎಸ್ಪಿ ರಸ್ತೆಯಲ್ಲಿರುವ ಅಂಗಡಿಯಲ್ಲಿ ರೂ.5.82 ಲಕ್ಷದ 6 ಐಫೋನ್ ಗಳು ಹಾಗೂ ಆ್ಯಪ್ ವಾಚ್’ನ್ನು ಖರೀದಿ ಮಾಡಿದ್ದರು. ತಾವು ಬೇರೆ ಕಡೆ ಹೋಗಬೇಕಿದ್ದರಿಂದ, ವಾಚ್ ಹಾಗೂ ಐ–ಫೋನ್‌ಗಳನ್ನು ವಿಜಯನಗರದ ತಮ್ಮ ಅಂಗಡಿಯ ವಿಳಾಸಕ್ಕೆ ಕಳುಹಿಸಲು ಡಂಜೊ ಆ್ಯಪ್ ಬಳಸಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಅರುಣ್ ಪಾಟೀಲ್ ಎಂಬ ಡೆಲಿವರಿ ಬಾಯ್ ವಸ್ತುಗಳನ್ನು ಪಡೆದುಕೊಂಡು ಹೋಗಿದ್ದಾನೆ. ಬಳಿಕ ಸ್ವಲ್ಪ ಸಮಯದ ನಂತರ ಉದ್ಯಮಿಯನ್ನು ಸಂಪರ್ಕಿಸಿ, ಪಾರ್ಸೆಲ್ ಅನ್ನು ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿರುವ ಮತ್ತೊಬ್ಬ ಡೆಲಿವರಿ ಬಾಯ್ ನಯನ್ ಎಂಬಾತನಿಗೆ ಹಸ್ತಾಂತರಿಸಲಾಗಿದ್ದು, ಆತ ಪಾರ್ಸೆಲ್’ನ್ನು ತಲುಪಿಸುತ್ತಾನೆಂದು ಹೇಳಿದ್ದಾನೆ. ಆದರೆ, ಸಾಕಷ್ಟು ಸಮಯಗಳಾದರೂ ವಸ್ತುಗಳು ಅಂಗಡಿಗೆ ತಲುಪಿಲ್ಲ. ಡೆಲಿವರಿ ಬಾಯ್ ಫೋನ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಉದ್ಯಮಿ ಪೊಲೀಸರಿಗೆ ದರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದರು. ತನಿಖೆ ವೇಳೆ ಆರೋಪಿಗಳಾದ ಬಸವರಾಜ್ ಹಾಗೂ ಮಾಫಪ್ಪ ಇಬ್ಬರೂ ಅರುಣ್ ಪಾಟೀಲ್ ಹಾಗೂ ನಯನ್ ಜೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ನೀಡಿ ಡೆಲಿವರಿ ಆ್ಯಪ್ ನಲ್ಲಿ ನೋಂದಣಿ ಮಾಡಿಕೊಂಡಿರುವುದು ಪತ್ತಯಾಗಿದೆ. ಈ ಹಿಂದೆ ಕೂಡ ವಂಚನೆ ಮಾಡಿದ್ದ ಹಿನ್ನೆಲೆಯಲ್ಲಿ ಕಂಪನಿ ಇಬ್ಬರನ್ನೂ ನೌಕರಿಯಿಂದ ವಜಾಗೊಳಿಸಿತ್ತು. ಆದರೆ, ನಕಲಿ ಗುರುತಿನ ಚೀಟಿಗಳ ನೀಡಿ ಮರಳಿ ಸೇರ್ಪಡೆಗೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.