Home ಕರ್ನಾಟಕ ಬೆಂಗಳೂರು | ಕೆಪಿಎಸ್ಸಿ ಸದಸ್ಯತ್ವ ಕೊಡಿಸುವುದಾಗಿ 4.10 ಕೋಟಿ ರೂ.ವಂಚನೆ ಆರೋಪ: ನಾಲ್ವರ ಬಂಧನ

ಬೆಂಗಳೂರು | ಕೆಪಿಎಸ್ಸಿ ಸದಸ್ಯತ್ವ ಕೊಡಿಸುವುದಾಗಿ 4.10 ಕೋಟಿ ರೂ.ವಂಚನೆ ಆರೋಪ: ನಾಲ್ವರ ಬಂಧನ

1
0

ಬೆಂಗಳೂರು : ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರ ಸೃಷ್ಟಿಸಿ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ)ಸದಸ್ಯತ್ವ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿ 4.10 ಕೋಟಿ ರೂ. ವಂಚಿಸಿದ್ದ ಆರೋಪದಡಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ವಂಚನೆಗೊಳಗಾದ ಕಲಬುರಗಿ ಮೂಲದ ಚಿತ್ರಕಲಾ ಶಿಕ್ಷಕಿ ನೀಲಮ್ಮ ಎಂ.ಬೆಳಮಗಿ(54) ಎಂಬುವರು ನೀಡಿದ ದೂರಿನ ಮೇರೆಗೆ ತಾವರೆಕೆರೆ ರಿಯಾಝ್ ಅಹ್ಮದ್(41), ಚಿಕ್ಕಮಗಳೂರಿನ ಮೂಡಿಗೆರೆಯ ನಿರ್ದೇಶಕರ ಕಚೇರಿಯಲ್ಲಿನ ತೋಟಗಾರಿಕಾ ಸಹಾಯಕ ಅಧಿಕಾರಿ ಚಂದ್ರಪ್ಪ(44), ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ರುದ್ರೇಶ್(35) ಹಾಗೂ ಯೂಸೂಫ್ ಸುಬ್ಬೇಕಟ್ಟೆ(47) ಎಂಬುವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಕಲಬುರಗಿಯ ಶಾಲೆಯೊಂದರಲ್ಲಿ ಚಿತ್ರಕಲಾ ಶಿಕ್ಷಕಿಯಾಗಿದ್ದಾರೆ. ತನಗೆ ಪರಿಚಿತನಾಗಿದ್ದ ರಿಯಾಝ್ ಅಹ್ಮದ್, ನನಗೆ ಪ್ರಧಾನಿ ನರೇಂದ್ರ ಮೋದಿ ಸಹೋದರರ ಪರಿಚಯವಿದೆ. ಕೆಪಿಎಸ್ಸಿ ಯಲ್ಲಿ ಸದಸ್ಯತ್ವ ನೀಡುವುದಾಗಿ ಭರವಸೆ ನೀಡಿದ್ದ. ಇದಕ್ಕೆ 15-20 ಕೋಟಿ ರೂ. ನೀಡಬೇಕು ಎಂದು ಹೇಳಿದ್ದ. ಇದರಂತೆ 2023ರಲ್ಲಿ ವಿವಿಧ ದಿನಾಂಕಗಳಲ್ಲಿ ಹಂತ ಹಂತವಾಗಿ 4.10 ಕೋಟಿ ರೂ. ಹಣವನ್ನು ಶಿಕ್ಷಕಿ ನಗರದ ಮಲ್ಲೇಶ್ವರದಲ್ಲಿರುವ ಆರೋಪಿ ಯೂಸೂಫ್‍ನ ಕಚೇರಿಗೆ ಹೋಗಿ ಬ್ಯಾಂಕ್ ಮೂಲಕ ಹಣ ವರ್ಗಾಯಿಸಿದ್ದರು ಎನ್ನಲಾಗಿದೆ.

ಮಲ್ಲೇಶ್ವರದಲ್ಲಿ ಆಕ್ಯೂರೇಟ್ ಟೈಂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಯೂಸೂಫ್ ಕಚೇರಿ ತೆರೆದಿದ್ದ. ಜಿಎಸ್‍ಟಿ ಶುಲ್ಕ ಪಾವತಿ ಸೇರಿ ಇತರೆ ಸರಕಾರಿ ಶುಲ್ಕ ಪಾವತಿ ಮಾಡಿಸುವ ಕೆಲಸ ಮಾಡಿಸುತ್ತಿದ್ದ. ಕೆಲವರಿಂದ ಹಣ ಪಡೆದು ವಂಚಿಸಿರುವ ಬಗ್ಗೆ ತಿಳಿದುಬಂದಿದೆ.

ಪರಿಚಿತರಾಗಿದ್ದ ರಿಯಾಝ್ ಹಾಗೂ ರುದ್ರೇಶ್ ಮೂಲಕ ಮಹಿಳೆಯನ್ನು ಕಚೇರಿಗೆ ಕರೆಯಿಸಿಕೊಂಡು ಯೂಸೂಫ್ ಹಣ ಪಾವತಿಸಿಕೊಂಡಿದ್ದ. ಮಹಿಳೆಯನ್ನು ನಂಬಿಸಲು ಮುಖ್ಯಮಂತ್ರಿಗಳ ಟಿಪ್ಪಣಿ, ನಡಾವಳಿ ಹಾಗೂ ನಕಲಿ ಸಹಿ ಮಾಡಿರುವ ಪತ್ರ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ಸುಳ್ಳು ರಾಜ್ಯಪತ್ರ ಸೃಷ್ಟಿಸಿ ಮೋಸ ಮಾಡಿದ್ದ. ಸದ್ಯ ಬಂಧಿತರಿಂದ 40 ಲಕ್ಷ ರೂಪಾಯಿ ನಗದು ನಾಲ್ಕು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here