ಕುಡಿದು ಬಂದು ಪ್ರತೀನಿತ್ಯ ಚಿತ್ರಹಿಂಸೆ ನೀಡುತ್ತಿದ್ದ ಮಗನಿಗೆ ತಾಯಿಯೊಬ್ಬಳು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆಯೊಂದು ಚಿಕ್ಕಬಾಣಾವರದ ಜನತಾ ಕಾಲೋನಿಯಲ್ಲಿ ನಡೆದಿದೆ. ಬೆಂಗಳೂರು: ಕುಡಿದು ಬಂದು ಪ್ರತೀನಿತ್ಯ ಚಿತ್ರಹಿಂಸೆ ನೀಡುತ್ತಿದ್ದ ಮಗನಿಗೆ ತಾಯಿಯೊಬ್ಬಳು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆಯೊಂದು ಚಿಕ್ಕಬಾಣಾವರದ ಜನತಾ ಕಾಲೋನಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಚಾಂದ್ ಪಾಷಾ (40) ಎಂದು ಗುರ್ತಿಸಲಾಗಿದೆ. 16 ವರ್ಷಗಳ ಹಿಂದೆ ಪತ್ನಿಯಿಂದ ಬೇರ್ಪಟ್ಟಿದ್ದ ಪಾಷಾ ತಾಯಿ ಬಳಿ ವಾಸವಿದ್ದ.
ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಪಾಷಾ ಕುಡಿದ ಮತ್ತಿನಲ್ಲಿ ಮನೆಗೆ ಬಂದು ಬಾಗಿಲಲ್ಲಿ ಕುಳಿತಿದ್ದಾನೆ. ಈ ವೇಳೆ ತಾಯಿಯೊಂದಿಗೆ ಜಗಳಕ್ಕಿಳಿದಿದ್ದಾನೆ. ಪ್ರತೀನಿತ್ಯ ಇದೇ ರೀತಿ ಚಿತ್ರಹಿಂಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ಆತನ ತಾಯಿ ಸೀಮೆಎಣ್ಣೆ ಸುರಿದು ಪಾಷಾಗೆ ಬೆಂಕಿ ಹಚ್ಚಿದ್ದಾಳೆ. ಇದೀಗ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಪಾಷಾ ಪ್ರತಿದಿನ ಕುಡಿದು ಮನೆಗೆ ಬಂದು ತಾಯಿಯೊಂದಿಗೆ ಜಗಳವಾಡುತ್ತಿದ್ದ. ತಾಯಿ ಸೋಫಿಯಾ ಆತನ ವರ್ತನೆಯಿಂದ ಬೇಸತ್ತು, ಪಾಠ ಕಲಿಸಲು ನಿರ್ಧರಿಸಿದ್ದಾರೆ. ಆತನಿಗೆ ಪಾಠ ಕಲಿಸಲು ಹೋಗಿ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಇದೀಗ ಸೋಫಿಯಾ ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.