ವ್ಯಕ್ತಿಯೊಬ್ಬನನ್ನು ಕೊಂದು, ಇದು ಸಹಜ ಸಾವು ಎಂದು ಹೇಳಿ ಆತನ ಮನೆಯವರನ್ನು ದಾರಿತಪ್ಪಿಸಲು ಯತ್ನಿಸಿದ 45 ವರ್ಷದ ವ್ಯಕ್ತಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು: ವ್ಯಕ್ತಿಯೊಬ್ಬನನ್ನು ಕೊಂದು, ಇದು ಸಹಜ ಸಾವು ಎಂದು ಹೇಳಿ ಆತನ ಮನೆಯವರನ್ನು ದಾರಿತಪ್ಪಿಸಲು ಯತ್ನಿಸಿದ 45 ವರ್ಷದ ವ್ಯಕ್ತಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸುರೇಶ್, ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದು, ಮಣಿಕಂಠ (44) ಮೃತ ವ್ಯಕ್ತಿ. ಇಬ್ಬರೂ ಜಯನಗರ ಸಮೀಪದ ಕೆಎಂ ಕಾಲೋನಿ ನಿವಾಸಿಗಳಾಗಿದ್ದರು. ಮಣಿಕಂಠ ತನ್ನ ಹೆಂಡತಿ ಮತ್ತು ಮಕ್ಕಳನ್ನು ತೊರೆದು ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದನು.
ಸುರೇಶ್ ಹೊಸ ಮನೆಯನ್ನು ನಿರ್ಮಿಸುತ್ತಿದ್ದು, ಮಾರ್ಚ್ 8 ರಂದು ಮಣಿಕಂಠ ಕುಡಿದ ಅಮಲಿನಲ್ಲಿ ಕಟ್ಟಡದ ಎರಡನೇ ಮಹಡಿಗೆ ತೆರಳಿ ಸುರೇಶ್ ಅವರ ಅತ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಸುರೇಶ್ ಈ ಬಗ್ಗೆ ಪ್ರಶ್ನಿಸಿದಾಗ, ಮಣಿಕಂಠ ಆತನನ್ನು ನಿಂದಿಸಿದ್ದಾನೆ ಮತ್ತು ಆತನ ಪತ್ನಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಸುರೇಶ್ ಮರದ ಹಲಗೆಯಿಂದ ಮಣಿಕಂಠನ ತಲೆಗೆ ಹೊಡೆದಿದ್ದಾನೆ ಮತ್ತು ರಸ್ತೆಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಮಣಿಕಂಠನ ತಾಯಿಗೆ ಕರೆ ಮಾಡಿ ನಿಮ್ಮ ಮಗ ಮನೆ ಬಳಿ ಬಿದ್ದಿದ್ದಾನೆ ಎಂದು ತಿಳಿಸಿದ್ದಾರೆ. ಬಳಿಕ ಆಕೆ ಅಲ್ಲಿಗೆ ಹೋದಾಗ, ನಿಮ್ಮ ಮಗ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದಾನೆ. ಮತ್ತೆ ಈ ರೀತಿ ಮಾಡಿದರೆ ಕೊಲೆ ಮಾಡುವುದಾಗಿ ಸುರೇಶ್ ಹೇಳಿದ್ದಾನೆ. ಮಣಿಕಂಠನ ತಾಯಿ ಸುರೇಶ್ ಬಳಿ ಕ್ಷಮೆಯಾಚಿಸಿ ಮಗನನ್ನು ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆತನ ಕುಟುಂಬ ಸದಸ್ಯರು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ವೇಳೆಗಾಗಲೇ ಆತ ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಅಸ್ವಾಭಾವಿಕ ಸಾವಿನ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಸುರೇಶ್‌ನನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಆತ, ತಾನೇನು ಮಾಡಿಲ್ಲ, ಮಣಿಕಂಠನ ತಾಯಿಗೆ ತಿಳಿಸಿದ್ದೇನೆ. ಮಣಿಕಂಠ ಆತನ ಮನೆಯ ಬಳಿಯೇ ಬಿದ್ದಿದ್ದಾನೆ ಎಂದು ಹೇಳುವ ಮೂಲಕ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಣಿಕಂಠ ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
‘ಕೊಲೆ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗಿದ್ದು, ಆರೋಪಿ ಮತ್ತು ಮೃತರ ನಡುವೆ ಜಗಳ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸುರೇಶ್ ಅವರನ್ನು ವಶಕ್ಕೆ ಪಡೆದಾಗ ಮಣಿಕಂಠನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.