Home Uncategorized ಬೆಂಗಳೂರು: ಪ್ರತ್ಯೇಕ ಅಪಘಾತದಲ್ಲಿ ಮೂವರ ಸಾವು

ಬೆಂಗಳೂರು: ಪ್ರತ್ಯೇಕ ಅಪಘಾತದಲ್ಲಿ ಮೂವರ ಸಾವು

6
0
bengaluru

ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಬೆಂಗಳೂರು: ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಹೊಸ ವರ್ಷ ಆಚರಿಸಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಈ ಅಪಘಾತಗಳಲ್ಲಿ ನಾಲ್ವರಿಗೆ ಗಾಯಗಳಾಗಿವೆ.

ದುರ್ಘಟನೆಯಲ್ಲಿ ಮೃತರ ಪೈಕಿ ಇಬ್ಬರು ತಮ್ಮ ಕುಟುಂಬ ಸದಸ್ಯರಿಗೆ ಮೊದಲು ದೇವಸ್ಥಾನಗಳಿಗೆ ಭೇಟಿ ನೀಡಿ ನಂತರ ಪಾರ್ಟಿ ಮಾಡುವುದಾಗಿ ಹೇಳಿದ್ದರೆಂದು ತಿಳಿದುಬಂದಿದೆ.

ಮೂರನೇ ಮೃತ ವ್ಯಕ್ತಿ ಸುಂಕದಕಟ್ಟೆ ನಿವಾಸಿ ಪ್ರಸಾದ್ ಆಗಿದ್ದು, ಸ್ನೇಹಿತರ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಕುಂಬಳಗೋಡು ವ್ಯಾಪ್ತಿಯ ಬಸವಗಂಗೋತ್ರಿ ಬಳಿ ಅತಿವೇಗದ ಚಾಲನೆಯಿಂದ ಕಾರು ಪಲ್ಟಿಯಾಗಿ ಸಾವನ್ನಪ್ಪಿದ್ದಾರೆ.

bengaluru

ಘಟನೆಯಲ್ಲಿ ಖಾಸಗಿ ಸಂಸ್ಥೆಯ ನೌಕರರಾದ ಮಂಜುನಾಥ್, ಶಶಿಧರ್, ಚೇತನ್ ಕುಮಾರ್ ಮತ್ತು ನವೀನ್ ಗಾಯಗೊಂಡಿದ್ದಾರೆ. ಈ ಸಂಬಂಧ ಕಾರು ಚಾಲಕ ನವೀನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಗಾಯಾಳುಗಳು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಬಹು ಮೂಳೆ ಮುರಿತಕ್ಕೊಳಗಾಗಿದ್ದಾರೆಂದು ತಿಳಿದುಬಂದಿದೆ. ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

ನೆಲಮಂಗಲ-ಕುಣಿಗಲ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಟೆಕ್ ಓದುತ್ತಿದ್ದ 19 ವರ್ಷದ ಕುಶಾಂತ್ ರೆಡ್ಡಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ರೆಡ್ಡಿ ಸಹಪಾಠಿ ಮಧು ಮೋಹನ್ ಗೆ ಕೂಡ ಹಲವು ಗಾಯಗಳಾಗಿದೆ. ಭಾನುವಾರ ಬೆಳ್ಳಂಬೆಳಗ್ಗೆ ಇಬ್ಬರೂ ಶ್ರವಣಬೆಳಗೊಳಕ್ಕೆ ತೆರಳುತ್ತಿದ್ದ ವೇಳೆ ಮುಂಜಾನೆ 5.50ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಬೆಂಗಳೂರು-ಮೈಸೂರು ರಸ್ತೆಯ ಸಾದಹಳ್ಳಿ ಬಳಿ ನಡೆದ ಮತ್ತೊಂದು ಅಪಘಾತದಲ್ಲಿ ಶ್ರೀನಗರದ 21 ವರ್ಷದ ರವಿಕಿರಣ್ ಸಾವನ್ನಪ್ಪಿದ್ದಾರೆ.

ಮೃತ ರವಿಕಿರಣ್ ಹಾಗೂ ಅವರ ಸ್ನೇಹಿತರು ದ್ವಿಚಕ್ರ ವಾಹನದಲ್ಲಿ ಕನಕಪುರದ ದೇವಸ್ಥಾನಕ್ಕೆ ಹೋಗುತ್ತಿದ್ದರು.

ಗುಂಪಿನಲ್ಲಿ ತೆರಳುತ್ತಿದ್ದ ಸ್ನೇಹಿತನೊಬ್ಬ ಅತಿವೇಗದಿಂದ ಸಾಗಿದ್ದು, ಈ ವೇಳೆ ಕಿರಣ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಕಿರಣ್ ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಕಿರಣ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ, ಬಳಿಕ ಅಲ್ಲಿಂದ ನಗರದ ಇನ್ನೊಂದು ಆಸ್ಪತ್ರೆಗೆ ಸಾಗಿಸಲಾಗಿದೆ ಆದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here