ಮಹಿಳೆಯೊಬ್ಬರನ್ನು ಹತ್ಯೆಗೈದು, 5 ವರ್ಷದ ಮಗುವನ್ನು ಅಪಹರಣ ಮಾಡಿರುವ ಘಟನೆಯೊಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಬೆಂಗಳೂರು: ಮಹಿಳೆಯೊಬ್ಬರನ್ನು ಹತ್ಯೆಗೈದು, 5 ವರ್ಷದ ಮಗುವನ್ನು ಅಪಹರಣ ಮಾಡಿರುವ ಘಟನೆಯೊಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ರಾತ್ರಿ 27 ವರ್ಷದ ವಿವಾಹಿತ ಮಹಿಳೆಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಮೃತ ಮಹಿಳೆಯನ್ನು ನಗರದ ಹೊರವಲಯದ ಕೋಳೂರು ಗ್ರಾಮದ ನಿವಾಸಿ ಭಾರತಿ ಎಂದು ಗುರುತಿಸಲಾಗಿದೆ.
ವ್ಯಕ್ತಿಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಭಾರತಿಯವರು ಪತಿಯನ್ನು ತೊರೆದು, ಮಗಳು ಹಾಗೂ ಪ್ರಿಯಕರನೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಬುಧವಾರ ರಾತ್ರಿ ಭಾರತಿಯವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಆಕೆಯ ತಲೆಗೆ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಬಳಿಕ ಮಗುವನ್ನು ಅಪಹರಿಸಿದ್ದಾರೆ.
ಭಾರತಿ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಗು ಪತ್ತೆಗಾಗಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.