ಮುಂಬೈ: ಈರುಳ್ಳಿ ಬಳಿಕ ಇದೀಗ ಬೆಳ್ಳುಳ್ಳಿ ದರ ಗಗನಕ್ಕೇರಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಬೆಳ್ಳುಳ್ಳಿ ದರ 300-400 ರೂಪಾಯಿ ತಲುಪಿದೆ.ಮಹಾರಾಷ್ಟ್ರದಾದ್ಯಂತ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಬೆಳ್ಳುಳ್ಳಿ ಬೆಳೆ ತೀವ್ರವಾಗಿ ಕುಸಿದು ಪೂರೈಕೆ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಬೆಳ್ಳುಳ್ಳಿ ಬೆಳೆಯುವ ಪ್ರಮುಖ ಪ್ರದೇಶಗಳಾದ ನಾಸಿಕ್ ಮತ್ತು ಪುಣೆಯಲ್ಲಿ ಪೂರೈಕೆ ಇಲ್ಲದ ಕಾರಣ ನೆರೆಯ ಗುಜರಾತ್, ಮಧ್ಯಪ್ರದೇಶ ಹಾಗೂ ಗುಜರಾತ್ ನಿಂದ ಬೆಳ್ಳುಳ್ಳಿ ಆಮದು ಮಾಡಿಕೊಳ್ಳುತ್ತಿರುವುದು ಸಾಗಾಣಿಕೆ ವೆಚ್ಚ ಮತ್ತು ಸ್ಥಳೀಯ ಲೆವಿ (ಕರ ಬೆಲೆ) ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಸಗಟು ಮಾರುಕಟ್ಟೆಗೆ ಪ್ರತಿದಿನ ಕೇವಲ 15-20 ಟ್ರಕ್ ಅಥವಾ ಮಿನಿ ಲಾರಿಗಳಲ್ಲಿ ಮಾತ್ರ ಪೂರೈಕೆಯಾಗುತ್ತಿದ್ದು, ಈ ಹಿಂದೆ ಸಾಮಾನ್ಯವಾಗಿ 25-30 ಲೋಡ್ ಪೂರೈಕೆಯಾಗುತ್ತಿತ್ತು.ಕಳೆದ ತಿಂಗಳು ಎಪಿಎಂಸಿ ಸಗಟು ಯಾರ್ಡ್ ಗಳಲ್ಲಿ ಪ್ರತಿ ಕೆ.ಜಿ.ಗೆ 100-150 ರೂಪಾಯಿ ಇದ್ದ ಬೆಳ್ಳುಳ್ಳಿ ದರ ಇದೀಗ 150-250 ರೂಪಾಯಿಗೆ ಹೆಚ್ಚಿದೆ. ಈ ಬದಲಾವಣೆಯಿಂದಾಗಿ ಚಿಲ್ಲರೆ ಮಾರಾಟ ದರ 300- 400 ರೂಪಾಯಿಗೆ ತಲುಪಿದೆ. ಕಳೆದ ಕೆಲ ವಾರಗಳಿಂದ ಬೆಳ್ಳುಳ್ಳಿ ಬೆಲೆ ದುಪ್ಪಟ್ಟು ಆಗಿದ್ದು, ಕೆಲ ವಾರಗಳ ವರೆಗೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇಲ್ಲ ಎಂದು ಮುಂಬೈಯ ವಾಶಿ ಎಪಿಎಂಸಿ ಅಂದಾಜಿಸಿದೆ.
ದಕ್ಷಿಣ ರಾಜ್ಯಗಳಿಂದ ಬರುವ ಪೂರೈಕೆ ಕೂಡಾ ಬಹುತೇಕ ಸ್ಥಗಿತಗೊಂಡಿರುವುದು ಪರಿಸ್ಥಿತಿಯ ವಿಕೋಪಕ್ಕೆ ಕಾರಣವಾಗಿದೆ. ಊಟಿ ಹಾಗೂ ಮಲಪ್ಪುರಂನಿಂದ ಕೂಡಾ ಪೂರೈಕೆ ಗಣನೀಯವಾಗಿ ಕುಸಿದಿರುವುದು ಬೆಲೆ ಹೆಚ್ಚಳಕ್ಕೆ ಕಾರಣ.