ನಿಂಗ್ಬೊ (ಚೀನಾ): ಚೀನಾದ ನಿಂಗ್ಬೊದಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಶ್ಯ ಚಾಂಪಿಯನ್‍ಶಿಪ್ಸ್‍ನಲ್ಲಿ ಬುಧವಾರ ಭಾರತದ ಎಚ್.ಎಸ್. ಪ್ರಣಯ್ ಮತ್ತು ಅವಳಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧೂ ಎರಡನೇ ಸುತ್ತಿಗೆ ತೇರ್ಗಡೆ ಹೊಂದಿದ್ದಾರೆ.
ಒಂಭತ್ತನೇ ವಿಶ್ವ ರ‍್ಯಾಂಕಿಂಗ್‍ನ ಪ್ರಣಯ್ ದೀರೋದಾತ್ತ ಪ್ರದರ್ಶನವೊಂದನ್ನು ನೀಡಿ ಚೀನಾದ 16ನೇ ವಿಶ್ವ ರ‍್ಯಾಂಕಿಂಗ್‍ನ ಲು ಗುವಾಂಗ್ ಝು ಅವರನ್ನು 17-21, 23-21, 23-21 ಗೇಮ್‍ಗಳಿಂದ ಸೋಲಿಸಿದರು. ಬಿರುಸಿನ ಪಂದ್ಯವು 90 ನಿಮಿಷಗಳವರೆಗೆ ಸಾಗಿತು.
ಅವರು ಎರಡನೇ ಸುತ್ತಿನಲ್ಲಿ, ಚೈನೀಸ್ ತೈಪೆಯ ಲಿನ್ ಚುನ್ ಯಿ ಅವರನ್ನು ಎದುರಿಸಲಿದ್ದಾರೆ.
ಅದೇ ವೇಳೆ, ಪ್ಯಾರಿಸ್ ಒಲಿಂಪಿಕ್ಸ್‍ಗೆ ಮುನ್ನ ತನ್ನ ಲಯವನ್ನು ಮರುಕಂಡುಕೊಳ್ಳಲು ಪರದಾಡುತ್ತಿರುವ ಸಿಂಧೂ, ಮಲೇಶ್ಯದ ಗೊಹ್ ಜಿನ್ ವೇ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ ಕೆಲವು ಆತಂಕದ ಕ್ಷಣಗಳನ್ನು ಎದುರಿಸಿದರಾದರೂ, ಅಂತಿಮವಾಗಿ ಪಂದ್ಯವನ್ನು ತನ್ನ ಹಿಡತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಅವರು 33ನೇ ವಿಶ್ವ ರ‍್ಯಾಂಕಿಂಗ್‍ನ ತನ್ನ ಎದುರಾಳಿಯನ್ನು 18-21, 21-14, 21-19 ಗೇಮ್‍ಗಳಿಂದ ಸೋಲಿಸಿದರು.
ಕಳೆದ ಬಾರಿ, ಸುದೀರ್‍ಮನ್ ಕಪ್‍ನಲ್ಲಿ ಈ ಇಬ್ಬರು ಆಟಗಾರ್ತಿಯರು ಮುಖಾಮುಖಿಯಾಗಿದ್ದಾಗ, ಸಿಂಧೂ ಸೋಲನುಭವಿಸಿದ್ದರು. ಆದರೆ, ಒಟ್ಟಾರೆಯಾಗಿ ಅವರು ಗೊಹ್ ಜಿನ್ ವೇ ವಿರುದ್ಧ 4-1ರ ಗೆಲುವು-ಸೋಲಿನ ದಾಖಲೆಯನ್ನು ಹೊಂದಿದ್ದಾರೆ.
ಸಿಂಧೂ ಎರಡನೇ ಸುತ್ತಿನಲ್ಲಿ ಚೀನಾದ ಹಾನ್ ಯುವೆ ಅವರನ್ನು ಎದುರಿಸಲಿದ್ದಾರೆ. ಅವರ ವಿರುದ್ಧ ಸಿಂಧೂ 5-0ಯ ಪರಿಪೂರ್ಣ ಗೆಲುವು-ಸೋಲಿನ ದಾಖಲೆಯನ್ನು ಹೊಂದಿದ್ದಾರೆ.
ಆದರೆ, ಲಕ್ಷ್ಯ ಸೇನ್‍ರ ಅದೃಷ್ಟ ಮಾತ್ರ ಚೆನ್ನಾಗಿರಲಿಲ್ಲ. ಅವರು ಸ್ಥಳೀಯ ನೆಚ್ಚಿನ ಆಟಗಾರ ಹಾಗೂ ಅಗ್ರ ಶ್ರೇಯಾಂಕದ ಶಿ ಯು ಕಿ ವಿರುದ್ಧ 19-21, 15-21 ಗೇಮ್‍ಗಳ ಅಂತರದಿಂದ ಸೋತರು.
ಅದೇ ವೇಳೆ, ಭಾರತದ ಕಿಡಂಬಿ ಶ್ರೀಕಾಂತ್ ಕೂಡ ಆರಂಭಿಕ ಸುತ್ತಿನಲ್ಲೇ ಇಂಡೋನೇಶ್ಯದ ಆ್ಯಂಟನಿ ಗಿಂಟಿಂಗ್ ವಿರುದ್ಧ 14-21, 13-21 ಗೇಮ್‍ಗಳಿಂದ ಸೋಲನುಭವಿಸಿದರು.