ಅಕ್ರಮವಾಗಿ ಬಂದೂಕು ಹೊಂದಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಮಂಜೇಶ್ವರದ ಮಿಯಾಪದವ್ ನಿವಾಸಿ ಅಬ್ಬಾಸ್ (61) ಮತ್ತು ಪೈವಳಿಕೆ ಮಂಜೇಶ್ವರದ ಯಶವಂತ್ ಕುಮಾರ್ (45) ಎಂದು ಗುರುತಿಸಲಾಗಿದೆ. ಮಂಗಳೂರು: ಪರವಾನಗಿ ಇಲ್ಲದೆ ಅಕ್ರಮವಾಗಿ ಬಂದೂಕು ಹೊಂದಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಮಂಜೇಶ್ವರದ ಮಿಯಾಪದವ್ ನಿವಾಸಿ ಅಬ್ಬಾಸ್ (61) ಮತ್ತು ಪೈವಳಿಕೆ ಮಂಜೇಶ್ವರದ ಯಶವಂತ್ ಕುಮಾರ್ (45) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದೆವು. ಆರೋಪಿಗಳನ್ನು ಬಜ್ಪೆಯ ಒಡ್ಡಿದಕಲ ಎಂಬಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಪರವಾನಗಿ ಇಲ್ಲದ ಪಿಸ್ತೂಲ್, 2 ಮೊಬೈಲ್ ಫೋನ್, ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 1.45 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರೂ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ. ಅಬ್ಬಾಸ್ ಮೇಲೆ ಹಲ್ಲೆ ಪ್ರಕರಣ ಹಾಗೂ ಮಜೇಶ್ವರ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಯಶವಂತ್ ವಿರುದ್ಧ ಮಂಗಳೂರು ದಕ್ಷಿಣ, ಮಂಜೇಶ್ವರ, ಕುಂಬಳೆ, ಬದಿಯಡ್ಕ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಕೊಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.