ಮುಂಬೈ: ಮಹಾರಾಷ್ಟ್ರದಲ್ಲಿ ಹಿರಿಯ ಮುಖಂಡ ಅಶೋಕ್ ಚವಾಣ್ ಬಳಿಕ ಮತ್ತಷ್ಟು ಮಂದಿ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ರಾಜೀನಾಮೆ ನೀಡಿದ ಶಾಸಕರು ಸಿಎಂ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ, ಬಿಜೆಪಿ ಅಥವಾ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಹೀಗೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಚವಾಣ್ ಜತೆ ಅವರ ನಿಷ್ಠಾವಂತ ಬೆಂಬಲಿಗ ಹಾಗೂ ಮಾಜಿ ಶಾಸಕ ರಾಜ್ ಕುಮಾರ್ ಕೂಡಾ ಪಕ್ಷ ತೊರೆದಿದ್ದರು.
ತಳಹಂತದ ಹಲವು ಮಂದಿ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಜತೆ ಸಂಪರ್ಕದಲ್ಲಿದ್ದಾರೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಹೇಳಿದ್ದಾರೆ. ಆದರೆ ಅಶೋಕ್ ಚವಾಣ್ ಬಿಜೆಪಿ ಸೇರುವ ಸಾಧ್ಯತೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಎಂಸಿ ಆವರಣದಲ್ಲಿ ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಗಳನ್ನು ಸ್ವಾಗತಿಸಲು ಬಿಜೆಪಿ ಕೇಂದ್ರ ಕಚೇರಿಗೆ ಫಡ್ನವೀಸ್ ಆಗಮಿಸಿದ್ದರು. 82ನೇ ವಾರ್ಡ್ ನ ಜಗದೀಶ್ ಅಮೀನ್ ಹಗೂ 2016ನೇ ವಾರ್ಡ್ ನ ರಾಜೇಂದ್ರ ನರ್ವಣ್ ಕರ್ ಅವರು ಫಡ್ನವೀಸ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ದೊಡ್ಡ ಸಂಖ್ಯೆಯ ಕಾಂಗ್ರೆಸ್ ಮುಖಂಡರಿಗೆ ಅಲ್ಲಿ ಉಸಿರುಕಟ್ಟುವ ವಾತಾವರಣವಿದ್ದು, ದೇಶದ ಇತರೆಡೆಗಳಂತೆ ಇಲ್ಲೂ ಶಾಸಕರು ಬಿಜೆಪಿ ಸೇರಲು ಬಯಸಿದ್ದಾರೆ ಎಂದು ಫಡ್ನವೀಸ್ ಹೇಳಿದ್ದಾರೆ.