Home Uncategorized ಮಾರ್ಚ್ 23ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 300 ಚಿತ್ರಗಳ ಪ್ರದರ್ಶನ

ಮಾರ್ಚ್ 23ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 300 ಚಿತ್ರಗಳ ಪ್ರದರ್ಶನ

23
0

ಬೆಂಗಳೂರಿನಲ್ಲಿ ಮಾರ್ಚ್ 23 ರಿಂದ ಮಾರ್ಚ್ 30 ರವರೆಗೆ ನಡೆಯಲಿರುವ 14ನೇ ಆವೃತ್ತಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫ್ಸ್) 2023ರಲ್ಲಿ ವಿಶ್ವದಾದ್ಯಂತ 50 ರಿಂದ 55 ದೇಶಗಳಿಂದ ವಿವಿಧ ಭಾಷೆಯ 300 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಬೆಂಗಳೂರು: ಬೆಂಗಳೂರಿನಲ್ಲಿ ಮಾರ್ಚ್ 23 ರಿಂದ ಮಾರ್ಚ್ 30 ರವರೆಗೆ ನಡೆಯಲಿರುವ 14ನೇ ಆವೃತ್ತಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫ್ಸ್) 2023ರಲ್ಲಿ ವಿಶ್ವದಾದ್ಯಂತ 50 ರಿಂದ 55 ದೇಶಗಳಿಂದ ವಿವಿಧ ಭಾಷೆಯ 300 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.

8 ದಿನಗಳ ಕಾಲ ನಡೆಯುವ ಈ ಉತ್ಸವವು ಇತ್ತೀಚಿನ ತಾಂತ್ರಿಕ ಪ್ರವೃತ್ತಿಗಳು ಮತ್ತು ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿನ ಬೆಳವಣಿಗೆಗಳ ವಿನಿಮಯಕ್ಕೆ ವೇದಿಕೆಯನ್ನು ಒದಗಿಸಲಿದೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿ ನೀಡಿದ ಕಂದಾಯ ಸಚಿವ ಹಾಗೂ ಸಂಘಟನಾ ಸಮಿತಿಯ ಅಧ್ಯಕ್ಷ ಆರ್ ಅಶೋಕ್ ಅವರು, 2023 ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಥೀಮ್ ನ್ನು ಇನ್ನೂ ನಿರ್ಧರಿಸಲಾಗಿಲ್ಲ. ಉದ್ಘಾಟನಾ ಕಾರ್ಯಕ್ರಮಕ್ಕೆ ಬಾಲಿವುಡ್‌ನ ಖ್ಯಾತ ಪುರುಷ ಮತ್ತು ಮಹಿಳಾ ಕಲಾವಿದರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುಮಾರು 50ಕ್ಕೂ ಅಧಿಕ ರಾಷ್ಟ್ರಗಳು ಭಾಗಿಯಾಗಲಿವೆ. ಇನ್ನು ಪ್ರಶಸ್ತಿ ಮೊತ್ತವನ್ನು ಹೆಚ್ಚಿಸಲು ಸಲಹೆ ಕೊಡಲಾಗಿದೆ. ಸದ್ಯ ಪ್ರಶಸ್ತಿ ಮೊತ್ತ ತಲಾ 1, 2 ಹಾಗೂ 3 ಲಕ್ಷ ರೂ. ವರೆಗೂ ಇದೆ. ಅದನ್ನು ಇನ್ನೂ ಜಾಸ್ತಿ ಮಾಡಲು ಸಲಹೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಿನಿಮಾ ಆಫ್ ದಿ ವರ್ಲ್ಡ್, ಏಷ್ಯನ್ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಒರಾಯನ್ ಮಾಲ್​​ನಲ್ಲಿ 11 ಪರದೆಗಳನ್ನು ತೆಗೆದುಕೊಳ್ಳಲಾಗಿದೆ.

‘ಚಲನಚಿತ್ರೋತ್ಸವದಲ್ಲಿ ಡಿಜಿಟಲ್ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. ಜ್ಯೂರಿ ಆಯ್ಕೆ ವಿಚಾರವಾಗಿ ಯಾವುದೇ ಗೊಂದಲ ಆಗದಂತೆ ಆಯ್ಕೆ ಸಮಿತಿಗೆ ಸದಸ್ಯರಿಗೆ ಸೂಚನೆ ನೀಡಿದ್ದೇನೆ. ಅಂತಾರಾಷ್ಟ್ರೀಯ ಉತ್ಸವದಿಂದ ಬೆಂಗಳೂರಿನ ವರ್ಚಸ್ಸು ಹೆಚ್ಚು ಮಾಡುವ ಉದ್ದೇಶ ಇದೆ. ಚಲನಚಿತ್ರೋತ್ಸವಕ್ಕೆ ಸೂಕ್ತ ಹಣಕಾಸಿನ ಸಹಾಯವನ್ನು ಸರ್ಕಾರ ನೀಡಲಿದೆ. 2017- 18ರಲ್ಲಿ 6 ಕೋಟಿ ರೂ., 2018- 19ರಲ್ಲಿ 5 ಕೋಟಿ ರೂ., 2019-20ರಲ್ಲಿ 4 ಕೋಟಿ ರೂ., ‌2020-21 ರಲ್ಲಿ 3 ಕೋಟಿ ರೂ., 2021-22ರಲ್ಲಿ 4.33 ಕೋಟಿ ರೂ. ಹಾಗೂ ಈ‌ ಬಾರಿ 4.49 ಕೋಟಿ ರೂ. ಅನುದಾನ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ (ಕೆಸಿಎ) ಅಧ್ಯಕ್ಷ ಅಶೋಕ್ ಕಶ್ಯಪ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here