ಈ ವರ್ಷದ ಆರಂಭದಲ್ಲಿ ನಮ್ಮ ಮೆಟ್ರೋ ಪಿಲ್ಲರ್ ಕುಸಿದು ಪತ್ನಿ ಮತ್ತು ಅಪ್ರಾಪ್ತ ಮಗುವನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರ, ಬಿಎಂಆರ್‌ಸಿಎಲ್ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ. ಬೆಂಗಳೂರು: ಈ ವರ್ಷದ ಆರಂಭದಲ್ಲಿ ನಮ್ಮ ಮೆಟ್ರೋ ಪಿಲ್ಲರ್ ಕುಸಿದು ಪತ್ನಿ ಮತ್ತು ಅಪ್ರಾಪ್ತ ಮಗುವನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರ ಲೋಹಿತ್‌ಕುಮಾರ್ ವಿ ಸುಲಾಖೆ ಅವರು 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದು, ಬಿಎಂಆರ್‌ಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಈ ವರ್ಷ ಜನವರಿ 10ರಂದು ನಾಗವಾರ ಬಳಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ಬೈಕ್‌ನಲ್ಲಿ ತೆರಳುತ್ತಿದ್ದ ಅರ್ಜಿದಾರರ ಪತ್ನಿ ತೇಜಸ್ವಿನಿ ಎಲ್ ಸುಲಾಖೆ (26) ಮತ್ತು ಅವರ ಎರಡೂವರೆ ವರ್ಷದ ಮಗ ವಿಹಾನ್ ಸಾವಿಗೀಡಾಗಿದ್ದರು. ಸಂತ್ರಸ್ತರ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವುದಾಗಿ ಬಿಎಂಆರ್‌ಸಿಎಲ್ ತಿಳಿಸಿತ್ತು.
ಪ್ರತಿವಾದಿಗಳ ಕಡೆಯಿಂದ ನಿಷ್ಕ್ರಿಯತೆ, ಅಸಮರ್ಪಕ ಸುರಕ್ಷತಾ ಕ್ರಮಗಳು ಮತ್ತು ಅಸಡ್ಡೆಯಿಂದ ಸಾವಿಗೀಡಾದ ಅಮಾಯಕರ ಜೀವಕ್ಕೆ ಕೇವಲ 20 ಲಕ್ಷ ರೂಪಾಯಿ ಪರಿಹಾರ ಸಾಕಾಗುವುದಿಲ್ಲ ಎಂದು ಲೋಹಿತ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ವಿಚಾರಣೆ ನಡೆಸಿದರು.
ಇದನ್ನೂ ಓದಿ: ನಮ್ಮ ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣ ಕೊಟ್ಟ ತಜ್ಞರು: ಐಐಎಸ್‌ಸಿ ನೀಡಿದ ವರದಿಯಲ್ಲೇನಿದೆ?
ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ತೇಜಸ್ವಿನಿ ತಿಂಗಳಿಗೆ 75,748 ರೂ. ಗಳಿಸುತ್ತಿದ್ದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪರಿಹಾರವು ಸಮರ್ಪಕವಾಗಿಲ್ಲ ಮತ್ತು ಇದು ಕೇವಲ ಅವರಿಂದ ತೆಗೆದುಕೊಳ್ಳಬೇಕಿದ್ದ ಸುರಕ್ಷತಾ ಕ್ರಮದ ನಿರ್ಲಕ್ಷ್ಯ ಮತ್ತು ಈ ಪ್ರಕರಣದ ಎಲ್ಲಾ ಪ್ರತಿವಾದಿಗಳಿಗೆ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳ ಬಗೆಗಿನ ಜ್ಞಾನದ ಕೊರತೆಯನ್ನು ಮರೆಮಾಡಲು ನೀಡಿರುವ ಪರಿಹಾರ ಇದಾಗಿದೆ. ಇವರ ನಿರ್ಲಕ್ಷ್ಯದಿಂದಾಗಿಯೇ ಎರಡು ಅಮಾಯಕ ಜೀವಗಳು ಬಲಿಯಾಗಿವೆ ಎಂದು ಅರ್ಜಿದಾರರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಸಾಲ ಮಾಡಿ ಫ್ಲ್ಯಾಟ್‌ಗೆ ತೆರಳಿದ್ದ ಕುಟುಂಬಕ್ಕೆ ತೇಜಸ್ವಿನಿ ಆಧಾರವಾಗಿದ್ದವರು ಎಂದು ತಿಳಿಸಿರುವ ಅರ್ಜಿಯಲ್ಲಿ ಸಂತ್ರಸ್ತ ಕುಟುಂಬಕ್ಕೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರಲಾಗಿದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪಿಲ್ಲರ್ ದುರಂತ: ಪೊಲೀಸರಿಂದ ಇಂಜಿನಿಯರ್ ಗಳು ಸೇರಿ 11 ಮಂದಿ ವಿರುದ್ಧ 1,100 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಪ್ರತಿವಾದಿಗಳಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿದ ನಂತರ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.
ಅರ್ಜಿಯ ಇತರ ಪ್ರತಿವಾದಿಗಳಲ್ಲಿ ಬಿಎಂಆರ್‌ಸಿಎಲ್‌ನ ಎಂಡಿ, ಮುಖ್ಯ ಎಂಜಿನಿಯರ್ ಮತ್ತು ಆಪರೇಷನ್ ಎಂಜಿನಿಯರ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್, ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಯ ಎಂಡಿ ಮತ್ತು ಅದರ ಪ್ರಾಜೆಕ್ಟ್ ಮ್ಯಾನೇಜರ್ ಸೇರಿದ್ದಾರೆ.