Home Uncategorized ಮೈಸೂರಿನಲ್ಲಿ ಮುಂದುವರಿದ ಹಾವಳಿ; ಶಂಕಿತ ಚಿರತೆ ದಾಳಿಗೆ 11 ವರ್ಷದ ಬಾಲಕ ಸಾವು

ಮೈಸೂರಿನಲ್ಲಿ ಮುಂದುವರಿದ ಹಾವಳಿ; ಶಂಕಿತ ಚಿರತೆ ದಾಳಿಗೆ 11 ವರ್ಷದ ಬಾಲಕ ಸಾವು

21
0

ಮೈಸೂರಿನ ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದು, ಚಿರತೆ ದಾಳಿಯ ಶಂಕೆ ವ್ಯಕ್ತವಾಗಿದೆ. ತಿ ನರಸೀಪುರ: ಮೈಸೂರಿನ ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದು, ಚಿರತೆ ದಾಳಿಯ ಶಂಕೆ ವ್ಯಕ್ತವಾಗಿದೆ.

ಮೃತನನ್ನು ಜಯಂತ್ ಎಂದು ಗುರುತಿಸಲಾಗಿದ್ದು, ಆತನ ಮೃತದೇಹ ಗ್ರಾಮದ ಹೊರವಲಯದಲ್ಲಿ 2 ಕಿ.ಮೀ ದೂರದಲ್ಲಿ ಗಿಡಗಂಟಿಗಳ ನಡುವೆ ಪತ್ತೆಯಾಗಿದೆ. ಕಳೆದ 48 ಗಂಟೆಗಳಲ್ಲಿ ಶಂಕಿತ ಚಿರತೆ ದಾಳಿಯಲ್ಲಿ ಇದು ಎರಡನೇ ಮತ್ತು ತಿ.ನರಸೀಪುರ ತಾಲೂಕಿನಲ್ಲಿ ನವೆಂಬರ್‌ ತಿಂಗಳಿನಿಂದ ನಾಲ್ಕನೇ ಸಾವಾಗಿದೆ.

ಶನಿವಾರ ಸಂಜೆ ದೂರು ಸ್ವೀಕರಿಸಿದ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರೂ, ರಾತ್ರಿಯೇ ಶೋಧ ಕಾರ್ಯವನ್ನು ನಿಲ್ಲಿಸಲಾಯಿತು. ಭಾನುವಾರ ಬೆಳ್ಳಂಬೆಳಗ್ಗೆ ಸ್ಥಳೀಯ ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದು, ಈ ವೇಳೆ ಬಾಲಕನ ಶವ ಮನೆಯಿಂದ ಸುಮಾರು 2 ಕಿ.ಮೀ ದೂರದಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

ಘಟನೆಯನ್ನು ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಖಚಿತಪಡಿಸಿದ್ದಾರೆ. ಚಿರತೆ ಗ್ರಾಮದ ಮುಖ್ಯ ರಸ್ತೆಯಿಂದಲೇ ಬಾಲಕನನ್ನು ಹೊತ್ತೊಯ್ದಿದೆ ಎಂದು ಅವರು ಹೇಳಿದರು. ಚಿರತೆ ಸೆರೆ ಹಿಡಿಯಲು ಸ್ಥಳದಲ್ಲಿ ಕೂಂಬಿಂಗ್ ಪುನರಾರಂಭವಾಗಿದೆ.

ಚಿರತೆ ದಾಳಿಗೆ ವೃದ್ಧೆ ಬಲಿ

ತಾಲೂಕಿನಲ್ಲಿ ಚಿರತೆ ದಾಳಿಗೆ ಈಗಾಗಲೇ ಇಬ್ಬರು ಮೃತಪಟ್ಟಿದ್ದು, ಈಗ ಕನ್ನಾಯಕನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಕನ್ನಾಯಕನಹಳ್ಳಿ ಗ್ರಾಮದ ನಿಂಗರಾಜು ಅವರ ಪತ್ನಿ ಸಿದ್ದಮ್ಮ (60) ಎಂಬುವರು ಮೃತಪಟ್ಟಿದ್ದಾರೆ. ಸಿದ್ದಮ್ಮ ಅವರು ಸಂಜೆ 6.30 ರಲ್ಲಿ ಬಹಿರ್ದೆಸೆಗೆಂದು ತೆರಳಿದ್ದಾಗ ಚಿರತೆ ದಾಳಿ ನಡೆಸಿದೆ.

ತಾಲೂಕಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಚಿರತೆ ದಾಳಿಗೆ ಇದು ಮೂರನೇ ಬಲಿಯಾಗಿದ್ದು, ಆ.30ರಂದು ಉಕ್ಕಲಗೆರೆ ಮಂಜುನಾಥ್‌, ಡಿ.1ರಂದು ಎಂ. ಕೆಬ್ಬೆಹುಂಡಿಯ ಮೇಘನಾ ಎಂಬುವರು ಚಿರತೆ ದಾಳಿಯಿಂದ ಸಾವಿಗೀಡಾಗಿದ್ದರು. ಇದೀಗ ಮತ್ತೊಬ್ಬರನ್ನು ಬಲಿ ಪಡೆದಿರುವುದು ಜನರಲ್ಲಿ ಮತ್ತಷ್ಟುಆತಂಕ ಹೆಚ್ಚಿಸಿದೆ.

ಪ್ರಕಟಣೆ ಹೊರಡಿಸಿದ ಅರಣ್ಯ ಇಲಾಖೆ

ಹೊರಳಹಳ್ಳಿ ಗ್ರಾಮದಲ್ಲಿ ಬಾಲಕ ಚಿರತೆ ದಾಳಿಗೆ ಬಲಿಯಾದ ಬಳಿಕ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಜನರು ಮನೆಯಿಂದ ಅನಗತ್ಯವಾಗಿ ಹೊರ ಬರಬೇಡಿ ಎಂದು ಹೇಳಿದೆ. ಸಂಜೆ ಮತ್ತು ರಾತ್ರಿ ಮಕ್ಕಳು, ಮಹಿಳೆಯರು ಒಂಟಿಯಾಗಿ ಸಂಚರಿಸಬೇಡಿ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಚಿರತೆ ಕಾಟ ತಡೆಯಲು ವಿಫಲರಾದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಿ.ನರಸೀಪುರ-ಚಾಮರಾಜನಗರ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

LEAVE A REPLY

Please enter your comment!
Please enter your name here