ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ತಾನು ವೈದ್ಯ ಎಂದು ಹೇಳಿಕೊಂಡು 15ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿದ್ದ ವಂಚಕನನ್ನು ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ. ಮೈಸೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ತಾನು ವೈದ್ಯ ಎಂದು ಹೇಳಿಕೊಂಡು 15ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿದ್ದ ವಂಚಕನನ್ನು ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ನಿವಾಸಿ ಕೆ.ಬಿ.ಮಹೇಶ್ ನಾಯಕ್(35) ಅವರು ಮ್ಯಾಟ್ರಿಮೋನಿಯಲ್ ವೆಬ್ ಸೈಟ್‌ಗಳಲ್ಲಿ ತನ್ನ ಪ್ರೊಫೈಲ್ ಅನ್ನು ಅಪ್‌ಲೋಡ್ ಮಾಡಿ 15ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದಾನೆ. ಆರೋಪಿ ಕೇವಲ 4ನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ಆದರೆ ತನ್ನ ಪ್ರೊಫೈಲ್ ನಲ್ಲಿ ವೈದ್ಯ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಇದನ್ನು ಓದಿ: ಯಲ್ಲಾಪುರ: ಮದುವೆಗೆ ಸಿಗದ ಹೆಣ್ಣು; ಮನನೊಂದ ಯುವಕ ಆತ್ಮಹತ್ಯೆ
ಕೆ.ಬಿ.ಮಹೇಶ್ ಮದುವೆಯಾದ ನಾಲ್ವರು ಮಹಿಳೆರಿಗೆ ಮಕ್ಕಳು ಸಹ ಇದ್ದಾರೆ ಎಂದು ಅವರು ಹೇಳಿದ್ದಾರೆ.
ಉತ್ತಮ ಆರ್ಥಿಕ ಹಿನ್ನೆಲೆಯುಳ್ಳ ವಿಚ್ಛೇದಿತರು ಅಥವಾ ವಿಧವೆಯರಾದ ಮಹಿಳೆಯರೇ ಇತನ ಟಾರ್ಗೆಟ್ ಆಗಿದ್ದು, ಹೆಚ್ಚಿನ ಮಹಿಳೆಯರು ಸ್ವತಂತ್ರವಾಗಿ ಕೆಲಸ ಮಾಡುವ ವೃತ್ತಿಪರರಾಗಿರುವುದರಿಂದ ಅವರು ವಂಚನೆ ಬಗ್ಗೆ ದೂರು ದಾಖಲಿಸಿಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸೆಪ್ರೆಸ್ ವರದಿ ಮಾಡಿದೆ.
ಈತ 2007ರಿಂದ ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದು, 15ಕ್ಕೂ ಹೆಚ್ಚು ಮಹಿಳೆಯರನ್ನು ವಂಚಿಸಿ, ಅವರಿಂದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾನೆ. ಮೈಸೂರಿನಲ್ಲೂ ಬಾಡಿಗೆ ಮನೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಹೇಮಲತಾ(45) ಎಂಬುವವರಿಗೆ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 15 ಲಕ್ಷ ನಗದು ವಂಚಿಸಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಕುವೆಂಪುನಗರ ಪೊಲೀಸರು ಮಹೇಶ್‌ನನ್ನು ಬಂಧಿಸಿದ್ದು, ಆತನಿಂದ ಎರಡು ಕಾರು, ಏಳು ಸೆಲ್‌ಫೋನ್‌ಗಳು, 2 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆತನ ತಂದೆ ಸಹ ಮಹೇಶ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.