ಬಂಟ್ವಾಳ, ಫೆ.13: ರೋಲರ್ ವಾಹನವನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ರೈಲ್ವೆ ಓವರ್ ಬ್ರಿಡ್ಜ್ ಅಡಿಭಾಗದಲ್ಲಿ ಘನ ವಾಹನಗಳ ಸಂಚಾರ ನಿರ್ಬಂಧಿಸಲು ಅಳವಡಿಸಿದ್ದ ಕಬ್ಬಿಣದ ಗೇಟ್ ನಲ್ಲಿ ಸಿಲುಕಿಕೊಂಡ ಘಟನೆ ಬಿ.ಸಿ.ರೋಡ್ – ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ಖಾಸಗಿ ಗುತ್ತಿಗೆ ಸಂಸ್ಥೆಗೆ ಸೇರಿದ ರೋಲರ್ ನ್ನು ಬೆಂಜನಪದವು ಸೈಟ್ ನಿಂದ ಪುತ್ತೂರಿನ ಸವಣೂರು ಎಂಬಲ್ಲಿ ನಡೆಯಲಿರುವ ಕಾಮಗಾರಿಗಾಗಿ ಕೊಂಡೊಯ್ಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ರೋಲರ್ ಸಿಲುಕಿದ್ದರಿಂದ ರೈಲ್ವೆ ಇಲಾಖೆ ಗೆ ಸೇರಿದ ಕಬ್ಬಿಣದ ರಾಡ್ ತುಂಡಾಗಿ ಲಾರಿಯ ಮೇಲೆ ಬಿದ್ದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.