ಮೋಂಟೆಕಾರ್ಲೊ: ಫ್ರಾನ್ಸ್‍ನ ಮೋಂಟೆ ಕಾರ್ಲೊ ಕಂಟ್ರಿ ಕ್ಲಬ್‍ನಲ್ಲಿ ನಡೆಯುತ್ತಿರುವ ಮೋಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯ ಪುರುಷರ ಡಬಲ್ಸ್ ಪ್ರಿಕ್ವಾರ್ಟರ್‍ಫೈನಲ್‍ನಲ್ಲಿ, ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯದ ಮ್ಯಾಥ್ಯೂ ಎಬ್ಡೆನ್ ಜೋಡಿ ಸೋಲನುಭವಿಸಿದೆ. ಬುಧವಾರ ಭಾರತ-ಆಸ್ಟ್ರೇಲಿಯ ಜೋಡಿಯನ್ನು ಕ್ರೊಯೇಶಿಯದ ಮೇಟ್ ಪವಿಕ್ ಮತ್ತು ಎಲ್ ಸಾಲ್ವಡೋರ್‍ನ ಮಾರ್ಸೆಲೊ ಅರೆವಲೊ ಜೋಡಿಯು 6-3, 7-6 (8-6) ಸೆಟ್‍ಗಳಿಂದ ಸೋಲಿಸಿದೆ.
ಬೋಪಣ್ಣ ಮತ್ತು ಎಬ್ಡೆನ್ ಮೊದಲ ಸೆಟ್‍ನಲ್ಲಿ ಆರಂಭದಲ್ಲೇ ಹಿಂದುಳಿದರು. ಬಳಿಕ ಅವರಿಗೆ ಸುಧಾರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎರಡನೇ ಸೆಟ್‍ನಲ್ಲಿ ಒಂದು ರೀತಿಯ ಪ್ರತಿ ಹೋರಾಟ ನೀಡುತ್ತಿರುವಂತೆ ಕಂಡರೂ, ಎದುರಾಳಿಗಳು ಟೆನಿಸ್‍ನ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಟೈಬ್ರೇಕರ್‍ನಲ್ಲಿ ಪಂದ್ಯವನ್ನು ವಶಪಡಿಸಿಕೊಂಡರು.
ಸುಮಿತ್ ನಾಗಲ್‍ಗೆ ಹಿನ್ನಡೆ
ಪುರುಷರ ಸಿಂಗಲ್ಸ್‍ನ ಎರಡನೇ ಸುತ್ತಿನ ಪಂದ್ಯವೊಂದರಲ್ಲಿ ಭಾರತದ ಅಗ್ರಗಣ್ಯ ಟೆನಿಸ್ ತಾರೆ ಸುಮಿತ್ ನಾಗಲ್ ಡೆನ್ಮಾರ್ಕ್‍ನ ಹೋಲ್ಗರ್ ರೂನ್ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ. ಮಳೆಯಿಂದಾಗಿ ಆ ಪಂದ್ಯವು ಬುಧವಾರ ಅಪೂರ್ಣವಾಗಿ ಉಳಿದಿದೆ.
ಏಳನೇ ಶ್ರೇಯಾಂಕದ ರೂನ್ ವಿರುದ್ಧದ ಪಂದ್ಯದ ಮೊದಲ ಸೆಟ್ಟನ್ನು ಶ್ರೇಯಾಂಕರಹಿತ ನಾಗಲ್ 3-6ರಿಂದ ಕಳೆದುಕೊಂಡರು. ಎರಡನೇ ಸೆಟ್‍ನಲ್ಲಿ ಅವರು 1-2ರ ಹಿನ್ನಡೆಯಲ್ಲಿದ್ದಾಗ ಮಳೆ ಸುರಿಯಲು ಆರಂಭಿಸಿತು. ಪಂದ್ಯವನ್ನು ಅಲ್ಲಿಗೆ ನಿಲ್ಲಿಸಲಾಯಿತು.
ಮಳೆಯಿಂದಾಗಿ ಆಟ ನಿಲ್ಲುವವರೆಗೂ ಹೋಲ್ಗರ್ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದರು.
36 ವರ್ಷದ ನಾಗಲ್ ಅರ್ಹತಾ ಪಂದ್ಯಗಳಲ್ಲಿ ಆಡಿ ಪ್ರಧಾನ ಸುತ್ತು ತಲುಪಿದ್ದಾರೆ. ಮೊದಲ ಅರ್ಹತಾ ಪಂದ್ಯದಲ್ಲಿ ಅವರು ಎಂಟನೇ ಶ್ರೇಯಾಂಕದ ಫ್ಲಾವಿಯೊ ಕೊಬೊಲಿಯನ್ನು ಮಣಿಸಿದ್ದರು. ಬಳಿಕ, ಮೂರನೇ ಶ್ರೇಯಾಂಕದ ಫಕುಂಡೊ ಡಿಯಾಝ್ ಅಕೋಸ್ಟೊರನ್ನು ಸೋಲಿಸಿ ಪಂದ್ಯಾವಳಿಯ ಪ್ರಧಾನ ಸುತ್ತು ಪ್ರವೇಶಿಸಿದ್ದರು.
ಬಳಿಕ, ಸೋಮವಾರ ಪ್ರಧಾನ ಸುತ್ತಿನ ಮೊದಲ ಸುತ್ತಿನಲ್ಲಿ ಇಟಲಿಯ ಮಟೇಯೊ ಅರ್ನಾಲ್ಡಿಯನ್ನು 5-7, 6-2, 6-4 ಸೆಟ್‍ಗಳಲ್ಲಿ ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದ್ದರು. ಆ ಮೂಲಕ, ಮೋಂಟೆ ಕಾರ್ಲೊ ಮಾಸ್ಟರ್ಸ್‍ನ ಪ್ರಧಾನ ಸುತ್ತಿನಲ್ಲಿ ಪುರುಷರ ಸಿಂಗಲ್ಸ್ ಪಂದ್ಯವೊಂದನ್ನು ಗೆದ್ದ ಮೊದಲ ಭಾರತೀಯ ಅವರಾದರು.