ಮಣಿಪುರ ರಾಜ್ಯದಲ್ಲಿನ ಪ್ರಸ್ತುತ ಪ್ರಕ್ಷುಬ್ದ ಪರಿಸ್ಥಿತಿಯಿಂದಾಗಿ ರಾಜ್ಯಕ್ಕೆ ಬರುವ ಮಣಿಪುರದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ನೀಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಬೆಂಗಳೂರು: ಮಣಿಪುರ ರಾಜ್ಯದಲ್ಲಿನ ಪ್ರಸ್ತುತ ಪ್ರಕ್ಷುಬ್ದ ಪರಿಸ್ಥಿತಿಯಿಂದಾಗಿ ರಾಜ್ಯಕ್ಕೆ ಬರುವ ಮಣಿಪುರದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ನೀಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಡಿಎಸ್‌ಇಎಲ್) ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಮಣಿಪುರದಲ್ಲಿ ಶಾಂತಿ ನೆಲೆಸುವ ಲಕ್ಷಣಗಳು ಕಂಡು ಬರದ ಹಿನ್ನೆಲೆಯಲ್ಲಿ ಆ ರಾಜ್ಯದ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಕರ್ನಾಟಕದ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುತ್ತಿದ್ದಾರೆ. ಶೈಕ್ಷಣಿಕ ವರ್ಷ ಪ್ರಾರಂಭವಾಗಿರುವುದರಿಂದ ಪ್ರವೇಶಕ್ಕಾಗಿ ಮಣಿಪುರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೆ, ಆ ಅರ್ಜಿಗಳ ಪರಿಗಣಿಸುವಂತೆ ಸುತ್ತೋಲೆಯಲ್ಲಿ ತಿಳಿಸಿದೆ.
ಮಣಿಪುರದ ವಿದ್ಯಾರ್ಥಿಗಳ ಶಾಲಾ ದಾಖಲಾತಿಗಾಗಿ ಅವಶ್ಯ ದಾಖಲೆ, ಪ್ರಮಾಣ ಪತ್ರ, ವರ್ಗಾವಣೆ ಪತ್ರ ಹಾಗೂ ಇನ್ನಿತರೆ ಶಾಲೆಗೆ ಸಂಬಂಧಿಸಿದ ದಾಖಲೆಗಳು ಲಭ್ಯವಿಲ್ಲದಿದ್ದಲ್ಲಿ, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ದಾಖಲಾತಿಯನ್ನು ನೀಡಬೇಕು,
ದಾಖಲಾತಿಯನ್ನು ಮಾಡಿಕೊಳ್ಳುವಾಗ ಜನನ ಪ್ರಮಾಣ ಪತ್ರ, ವರ್ಗಾವಣೆ ಪತ್ರ ಅಥವಾ ಯಾವುದೇ ದಾಖಲೆಗಳು ನೀಡುವಂತೆ ಒತ್ತಾಯಿಸಬಾರದು. ವಿದ್ಯಾರ್ಥಿ ಅಥವಾ ಪಾಲಕರಿಂದ ಸ್ವಯಂ ದೃಢೀಕರಣ ಪತ್ರವನ್ನು ಪಡೆದು ವಿದ್ಯಾರ್ಥಿಯು ಹಿಂದಿನ ಶಾಲೆಯಲ್ಲಿ ಯಾವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆಯೋ ಅದೇ ತರಗತಿಗಳಿಗೆ ದಾಖಲಾತಿ ಮಾಡಿಕೊಳ್ಳಲು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.