ಹೊಸದಿಲ್ಲಿ: ಮಂಗಳವಾರ ರೈತರು ನೀಡಿರುವ ಪ್ರತಿಭಟನೆಯ ಕರೆ ಹಿನ್ನೆಲೆಯಲ್ಲಿ ದಿಲ್ಲಿಯಾದ್ಯಂತ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ತಿಳಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಮಂಗಳವಾರ ರೈತರು ಕರೆ ನೀಡಿರುವ ‘ದಿಲ್ಲಿ ಚಲೊ’ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸಲು ದಿಲ್ಲಿಯಾದ್ಯಂತ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144ರ ಅನ್ವಯ ದಿಲ್ಲಿಯಾದ್ಯಂತ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ದೊಡ್ಡ ಸಭೆಗಳಿಗೆ ನಿಷೇಧ ಹೇರಲಾಗಿದೆ ಎಂದು ಸೋಮವಾರ ಸಂಜಯ್ ಅರೋರಾ ಹೇಳಿದ್ದಾರೆ.
ಕಾಂಕ್ರೀಟ್ ತಡೆಗೋಡೆಗಳು ಹಾಗೂ ನೆಲಕ್ಕೆ ಉಕ್ಕಿನ ಮೊಳೆಯನ್ನು ಹಾಸುವ ಮೂಲಕ ಪ್ರತಿಭಟನಾಕಾರರನ್ನು ಹೊತ್ತು ಬರುವ ವಾಹನಗಳು ನಗರವನ್ನು ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮದಿಂದಾಗಿ ಸೋಮವಾರ ದಿಲ್ಲಿಯ ಗಡಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪ್ರಯಾಣಿಕರು ಪರದಾಡಬೇಕಾಯಿತು.
2021ರಲ್ಲಿ ತಮ್ಮ ಪ್ರತಿಭಟನೆಯನ್ನು ಹಿಂಪಡೆಯುವಾಗ ಕೇಂದ್ರ ಸರಕಾರದೆದುರು ಮಂಡಿಸಿದ್ದ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ರೈತರ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಹಲವಾರು ರೈತ ಸಂಘಟನೆಗಳು ಭಾಗವಹಿಸುತ್ತಿದ್ದು, ಬಹುತೇಕ ಸಂಘಟನೆಗಳು ಉತ್ತರ ಪ್ರದೇಶ, ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಿಗೆ ಸೇರಿವೆ.