ಆಟೋರಿಕ್ಷಾ ಚಾಲಕರೊಬ್ಬರು 42 ವರ್ಷದ ಐಟಿ ಉದ್ಯೋಗಿಯೊಬ್ಬರ ಕಾರಿನ ಮೇಲೆ ದಾಳಿ ನಡೆಸಿ, ಗಾಜನ್ನು ಒಡೆದುಹಾಕುವ ಮೂಲಕ ಕಾರಿನಲ್ಲಿದ್ದ ಐಟಿ ಉದ್ಯೋಗಿ ಪತ್ನಿ ಹಾಗೂ ಐದು ವರ್ಷದ ಮಗುವಿಗೆ ಜೀವ ಭಯವನ್ನುಂಟು ಮಾಡಿದ ಘಟನೆ ನಗರದ ವೈಟ್ ಫೀಲ್ಡ್ ನಲ್ಲಿ ನಡೆದಿದೆ. ಬೆಂಗಳೂರು: ಆಟೋರಿಕ್ಷಾ ಚಾಲಕರೊಬ್ಬರು 42 ವರ್ಷದ ಐಟಿ ಉದ್ಯೋಗಿಯೊಬ್ಬರ ಕಾರಿನ ಮೇಲೆ ದಾಳಿ ನಡೆಸಿ, ಗಾಜನ್ನು ಒಡೆದುಹಾಕುವ ಮೂಲಕ ಕಾರಿನಲ್ಲಿದ್ದ ಐಟಿ ಉದ್ಯೋಗಿ ಪತ್ನಿ ಹಾಗೂ ಐದು ವರ್ಷದ ಮಗುವಿಗೆ ಜೀವ ಭಯವನ್ನುಂಟು ಮಾಡಿದ ಘಟನೆ ನಗರದ ವೈಟ್ ಫೀಲ್ಡ್ ನಲ್ಲಿ ನಡೆದಿದೆ.
ವೈಟ್‌ಫೀಲ್ಡ್‌ನ ಪ್ರೆಸ್ಟೀಜ್ ಲೇಕ್‌ಸೈಡ್ ಹ್ಯಾಬಿಟಾಟ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ನೀಲಭ್ ಪಾಂಡೆ ಮತ್ತು ಅವರ ಕುಟುಂಬ ಮಂಗಳವಾರ ಮಧ್ಯಾಹ್ನ ಮಣಿಪಾಲ್ ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದಾಗ ಬಿಇಎಂಎಲ್ ಲೇಔಟ್‌ನ 16ನೇ ಕ್ರಾಸ್, 8ನೇ ಮೇನ್‌ನಲ್ಲಿ ಈ ಘಟನೆ ನಡೆದಿದೆ.
ಯಾವುದೇ ಸೂಚನೆಯಿಲ್ಲದೆ ಕಾರು ಏಕಾಏಕಿ ತನ್ನ ಆಟೋ ಮುಂದೆ ಬಂದಿತ್ತು ಎಂಬ ಕಾರಣಕ್ಕೆ ಕಾರನ್ನು ನಿಲ್ಲಿಸಿದ ಆರೋಪಿ ಎಚ್.ಎನ್. ದರ್ಶನ್ ವಿಂಡ್‌ಸ್ಕ್ರೀನ್ ವೈಪರ್‌ಗಳನ್ನು ಒಡೆದು ಹಾಕಿದ್ದು, ಹಾನಿ ಮಾಡಿದ್ದಾನೆ. ಆದರೆ, ಭಯಭೀತಗೊಂಡಿದ್ದ ಕುಟುಂಬ ಕಾರಿನಿಂದ ಹೊರಗೆ ಬರಲು ನಿರಾಕರಿಸಿದೆ. ನಂತರ ದರ್ಶನ್ ಕಾರಿನ ಗಾಜುಗಳನ್ನು ಒಡೆದು ಹಾಕಿದ್ದಾನೆ. ಪುಡಿ ಪುಡಿಯಾದ ಕಾರಿನ ಗಾಜುಗಳಿಂದ ನೀಲಭ್ ಪತ್ನಿ ತಲೆಗೆ ಗಾಯವಾಗಿದ್ದು, ದಂಪತಿಗಳು ತಮ್ಮ ಮಗುವನ್ನು ರಕ್ಷಿಸಲು ಹಿಂದಿನ ಸೀಟಿಗೆ ತಳ್ಳಿದ್ದು, ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ.
ಆಟೊ ಚಾಲಕ ಹೊರಗೆ ಕಾದು ಕುಳಿತಿದ್ದರಿಂದ ಹೆದರಿ ಆಸ್ಪತ್ರೆಗೆ ಬರಲು ಹೆದರಿದ ಕುಟುಂಬ ವೈದ್ಯರನ್ನು ಚಿಕಿತ್ಸೆಗಾಗಿ ಮನೆಗೆ ಕರೆಸಿಕೊಂಡಿದ್ದಾರೆ. ಈ ಸಂಬಂಧ ಪಾಂಡೆ ವೈಟ್‌ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರ್ಶನ್‌ನನ್ನು ಬಂಧಿಸಿ ಅವರ ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ಎಚ್‌ಎಎಲ್‌ನ ಕಗ್ಗದಾಸಪುರದ ಎಚ್‌ಎನ್ ದರ್ಶನ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯ ವಿರುದ್ಧ ಕೊಲೆ ಯತ್ನ (ಐಪಿಸಿ 307) ಪ್ರಕರಣ ದಾಖಲಾಗಿದೆ. ಆಟೋರಿಕ್ಷಾವನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಸ್ ಗಿರೀಶ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.