ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಗೆ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ನಡುವಲ್ಲೇ ಉತ್ತಮ ಸೇವೆ ಒದಗಿಸಲು ಪ್ರಯಾಣಿಕರಿಂದ ಪ್ರತಿಕ್ರಿಯೆ ಪಡೆಯಲು ಬಿಎಂಟಿಸಿ ಮುಂದಾಗಿದೆ. ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಗೆ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ನಡುವಲ್ಲೇ ಉತ್ತಮ ಸೇವೆ ಒದಗಿಸಲು ಪ್ರಯಾಣಿಕರಿಂದ ಪ್ರತಿಕ್ರಿಯೆ ಪಡೆಯಲು ಬಿಎಂಟಿಸಿ ಮುಂದಾಗಿದೆ.
ಇದಕ್ಕಾಗಿ 200ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಿಸಿರುವ ಬಿಎಂಟಿಸಿ, ವಿವಿಧ ಮಾರ್ಗಗಳಿಗೆ ತೆರಳಿ ಪ್ರಯಾಣಿಕರ ಅಭಿಪ್ರಾಯ, ಸಲಹೆಗಳ ಪಡೆಯುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಉಚಿತ ಬಸ್ ಯೋಜನೆ ಜೂನ್ 11ರಿಂದ ಜಾರಿಗೆ ಬಂದಿದ್ದು, ಅಂದಿನಿಂದಲೂ ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಬಂದಿದೆ.
ಯೋಜನೆಗೂ ಮೊದಲು ಬಿಎಂಟಿಸಿಯಲ್ಲಿ 27.34 ಲಕ್ಷ ಪ್ರಯಾಣಿಕರು ಪ್ರತೀನಿತ್ಯ ಪ್ರಯಾಣಿಸುತ್ತಿದ್ದರು. ಈ ಸಂಖ್ಯೆ ಇದೀಗ 40 ಲಕ್ಷಕ್ಕೆ ಏರಿಕೆಯಾಗಿದೆ.
ಯೋಜನೆಗೆ ಸಾಕಷ್ಟು ಮಹಿಳೆಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ, ಯೋಜನೆಯಿಂದಾಗಿ ಹಲವಾರು ಸಮಸ್ಯೆಗಳು ಎದುರಾಗುತ್ತಿದೆ ಎನ್ನಲಾಗಿದೆ. ಸಮಯಕ್ಕೆ ಸರಿಯಾಗಿ ಬಸ್ ಗಳು ಸಿಗದೆ ವಿದ್ಯಾರ್ಥಿಗಳು ಹಾಗೂ ಕಚೇರಿಗೆ ತೆರಳುವವರಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಬಿಎಂಟಿಸಿ ಎಂಡಿ ಜಿ ಸತ್ಯವತಿ ಅವರು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿ, ಯೋಜನೆ ಕುರಿತು ಹಾಗೂ ಬಸ್ ನಿರ್ವಾಹಕರ ಸಮಸ್ಯೆಗಳನ್ನು ಸ್ವತಃ ಪರಿಶೀಲನೆ ನಡೆಸಿದ್ದರು. ಇದೀಗ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ 200 ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸತ್ಯವತಿಯವರು, ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜನರಿಂದ ಪ್ರತಿಕ್ರಿಯೆ ಪಡೆದುಕೊಂಡು, ಉತ್ತಮ ಸೇವೆ ಒದಗಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.
“ಕಂಡಕ್ಟರ್‌ಗಳು ಪಾಸ್‌ಗಳನ್ನು ಪರಿಶೀಲಿಸಲು ಮತ್ತು ಶೂನ್ಯ ಟಿಕೆಟ್‌ಗಳನ್ನು ನೀಡಲು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಬಸ್’ಗಳನ್ನು ಅಲ್ಲಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಬಸ್ ಗಳು ಸಿಗುತ್ತಿಲ್ಲ. ಇದು ಪ್ರಯಾಣದ ಸಮಯವನ್ನು ಹೆಚ್ಚಿಸುತ್ತಿದೆ. ಪೀಕ್ ಅವರ್ ನಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಹೆಚ್ಚಿನ ಬಸ್‌ಗಳ ಸೇರ್ಪಡೆ ಅಗತ್ಯವಿದೆ ಎಂದು ಪ್ರಯಾಣಿಕರಾಗಿರುವ ಮಾಲತಿ ಎಂಬುವವರು ಹೇಳಿದ್ದಾರೆ