ತಮ್ಮದಲ್ಲದ ತಪ್ಪಿಗೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಮಹದೇವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಸಂಕಷ್ಟ ಎದುರಿಸಿದರು. ಬೆಂಗಳೂರು: ತಮ್ಮದಲ್ಲದ ತಪ್ಪಿಗೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಮಹದೇವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಸಂಕಷ್ಟ ಎದುರಿಸಿದರು.
ಶಾಲೆ ಇರುವ ಜಮೀನು ವ್ಯಾಜ್ಯದಲ್ಲಿದ್ದು, ಇದರ ಪರಿಣಾಮ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ಬಯಲಿನಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಕೆಲ ವ್ಯಕ್ತಿಗಳು ಇದ್ದಕ್ಕಿದ್ದಂತೆ ಶಾಲಾ ಆವರಣಕ್ಕೆ ನುಗ್ಗಿದ್ದು, ಭಾನುವಾರ ಶಾಲೆ ಮುಚ್ಚಿದ್ದರೂ ಕೂಡ ಶಾಲೆಗೆ ಬಂದು ಕೊಠಡಿಗಳಿಗೆ ಬೀಗ ಹಾಕಿ ಹೋಗಿದ್ದರು. ಬೆಂಗಳೂರಿನ ಐಟಿಪಿಎಲ್ ಬಳಿ ಇರುವ ಶಾಲೆಗೆ ಕೆಲ ವ್ಯಕ್ತಿಗಳು ಬೀಗ ಜಡಿದಿದ್ದಾರೆ. ಸೋಮವಾರ ಶಾಲೆಗೆ ಮತ್ತೆ ಬಂದು ಶಿಕ್ಷಕರಿಗೆ ಶಾಲೆಗೆ ಬರದಂತೆ ಬೆದರಿಕೆ ಹಾಕಿದ್ದಾರೆ.
ಇದರ ಪರಿಣಾಮ ಮಕ್ಕಳು ಸೋಮವಾರ ತರಗತಿಯ ಹೊರಗೆ ತೆರೆದ ಮೈದಾನದಲ್ಲಿ ಕುಳಿತುಕೊಂಡಿದ್ದದ್ದು ಕಂಡು ಬಂದಿತ್ತು. ಈ ವೇಳೆ ಬಿಇಒ ಪೊಲೀಸರಿಗೆ ದೂರು ನೀಡಿದ್ದು, ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳು ತರಗತಿಗಳ ಒಳಗೆ ಕುಳಿತುಕೊಳ್ಳಲು ಅನುಮತಿ ನೀಡಿದರು.
ವೈಟ್ಫೀಲ್ಡ್ ಮುಖ್ಯರಸ್ತೆಯ ಫೀನಿಕ್ಸ್ ಮಾಲ್ಗೆ ಸಮೀಪವಿರುವ ಜಮೀನು 89 X 74 ಅಡಿ ವಿಸ್ತೀರ್ಣ ಹೊಂದಿದ್ದು, ಇದರ ಮೌಲ್ಯ ಸುಮಾರು 15 ಕೋಟಿ ಎಂದು ಹೇಳಲಾಗುತ್ತಿದೆ.
ಈ ಭೂಮಿಯಲ್ಲಿ ಶಾಲೆಯಿದ್ದು, ಕಟ್ಟಡದಲ್ಲಿ ಏಳು ಕೊಠಡಿಗಳು, ಶೌಚಾಲಯಗಳು ಮತ್ತು ಇತರ ಸೌಲಭ್ಯಗಳಿವೆ. ಈ ಭೂಮಿಯಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1964 ರಲ್ಲಿ ಪ್ರಾರಂಭಗೊಂಡಿತ್ತು. ಇಂದಿಗೂ ಕಟ್ಟಡದಲ್ಲಿ 4, 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ.
2018 ರಲ್ಲಿ, ಹೋಪ್ ಫೌಂಡೇಶನ್ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಿದ್ದು, ಇಲ್ಲಿ ಇಂಗ್ಲೀಷ್ ಮಾಧ್ಯಮದ ಶಾಲೆಯನ್ನು ಆರಂಭಿಸಲಾಗಿದೆ. ಆದರೆ, ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಹಳೆಯ ಕಟ್ಟಡದಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೊಸ ಕಟ್ಟಡವಿದ್ದರೂ ಆಸ್ತಿ ಕಳೆದುಕೊಳ್ಳುವ ಭೀತಿಯಿಂದ ಮಕ್ಕಳನ್ನು ಸ್ಥಳಾಂತರಿಸಲು ಮುಂದಾಗುತ್ತಿಲ್ಲ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ನಾವು ಸಂಪೂರ್ಣವಾಗಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡರೆ, ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಾಲೆಯ ಭೂಮಿಯನ್ನು ಯಾರೋ ಸ್ವಾಧೀನಪಡಿಸಿಕೊಳ್ಳುತ್ತಾರೆಂಬ ಆತಂಕ ಶಿಕ್ಷಣ ಇಲಾಖೆಗೆ ಮೂಡಿದೆ ಎನ್ನಲಾಗಿದೆ.
60ರ ದಶಕದಲ್ಲಿ ಡಿ ಪುಟ್ಟಪ್ಪ ಎಂಬುವರು ಭೂಮಿಯನ್ನು ದಾನವಾಗಿ ನೀಡಿದ್ದರು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ನಂತರ, ಇದನ್ನು ಕೈಗಾರಿಕಾ ಇಲಾಖೆ ಸ್ವಾಧೀನಪಡಿಸಿಕೊಂಡಿತು.
ಇತ್ತೀಚಿನ ಭೂ ದಾಖಲೆಗಳ ಪ್ರಕಾರ, ಇದು ಕೆಐಎಡಿಬಿಗೆ ಸೇರಿದೆ ಎಂದು ಹೇಳಲಾಗುತ್ತಿದ್ದು, ಆದರೂ ಕೆಲವು ವ್ಯಕ್ತಿಗಳು ಜಮೀನು ತಮಗೆ ಸೇರಿದ್ದು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಶಾಶ್ವತ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ. ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದು, ಮುಂದಿನ ವಿಚಾರಣೆ ಫೆಬ್ರವರಿ 4 ರಂದು ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕ್ಷೇತ್ರದ ಶಿಕ್ಷಣಾಧಿಕಾರಿ ರಾಮಮೂರ್ತಿಯವರು ಮಾತನಾಡಿ, ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿರುವುದರಿಂದ ಶಾಲೆ ಮುಂದುವರೆಯಲು ಅವಕಾಶ ನೀಡಬೇಕಿತ್ತು ಎಂದು ಹೇಳಿದ್ದಾರೆ.
