ಸಕಲೇಶಪುರದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಈಶ್ವರಹಳ್ಳಿ ಕೂಡಿಗೆ ಬಳಿ ಕಾರು ಮತ್ತು ಟಿಪ್ಪರ್ ವಾಹನ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಸಕಲೇಶಪುರ (ಹಾಸನ): ಸಕಲೇಶಪುರದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಈಶ್ವರಹಳ್ಳಿ ಕೂಡಿಗೆ ಬಳಿ ಕಾರು ಮತ್ತು ಟಿಪ್ಪರ್ ವಾಹನ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ಕುಪ್ಪಹಳ್ಳಿಯ ಚೇತನ್ (22), ಗುಡ್ಡೇನಹಳ್ಳಿಯ ಅಶೋಕ್ (21), ತಟ್ಟೆಕೆರೆಯ ಪುರುಷೋತ್ತಮ್ (23) ಮತ್ತು ಹಾಸನ ಸಮೀಪದ ಚಿಗಳೂರು ಗ್ರಾಮದ ದಿನೇಶ್ (20) ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ಸ್ನೇಹಿತರಾಗಿದ್ದು, ಸಕಲೇಶಪುರಕ್ಕೆ ಜಾಲಿ ರೈಡ್ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಟೊಯೊಟಾ ಇನ್ನೋವಾ ಕಾರು ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡುವಾಗ ಎದುರಿಗೆ ಬರುತ್ತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಾರಿನ ಅರ್ಧ ಭಾಗವು ಟಿಪ್ಪರ್ ಅಡಿಯಲ್ಲಿ ಸಿಲುಕಿಕೊಂಡಿದ್ದರಿಂದ ಪೊಲೀಸರು ಕಾರು ಮತ್ತು ಟಿಪ್ಪರ್ ಅನ್ನು ಬೇರ್ಪಡಿಸಲು ಕ್ರೇನ್ ಬಳಕೆ ಮಾಡುವಂತಾಯಿತು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಘಟನೆ ಬಳಿಕ ಟಿಪ್ಪರ್ ವಾಹನ ವಶಪಡಿಸಿಕೊಂಡ ಪೊಲೀಸರು, ಮೃತದೇಹಗಳನ್ನು ಹಾಸನದ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.