ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಬೆಂಗಳೂರಿನ ಆಭರಣ ವ್ಯಾಪಾರಿಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು: ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಬೆಂಗಳೂರಿನ ಆಭರಣ ವ್ಯಾಪಾರಿಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿ ಮಾಡಿದರೆ ಐಶ್ವರ್ಯಾ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಪ್ರತಿ ವರ್ಷವೂ ಹಬ್ಬದ ಸಂದರ್ಭದಲ್ಲಿ ಬಹುತೇಕ ಮಂದಿ ಚಿನ್ನ ಖರೀದಿ ಮಾಡುತ್ತಾರೆ. ಆದರೆ, ಈ ಬಾರಿ ಖರೀದಿಯಲ್ಲಿ ಕುಂಠಿತಗೊಂಡಿರುವುದು ಕಂಡು ಬಂದಿದೆ.
ದೊಡ್ಡ ದೊಡ್ಡ ಮಳಿಗೆಗಳಲ್ಲಿ ಭಾರೀ ಪ್ರಮಾಣದ ಜನರು ಕಂಡು ಬಂದಿದ್ದರೆ, ಸಣ್ಣ ಮಳಿಗೆಗಳಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದದ್ದು ಕಂಡು ಬಂದಿದ್ದು.
ಕಳೆದ ವಾರವಷ್ಟೇ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಹೀಗಾಗಿ ಅಕ್ಷಯ ತೃತೀಯ ದಿನದಂದು ಹೆಚ್ಚಿನ ಜನರು ಚಿನ್ನ ಖರೀದಿ ಮಾಡುತ್ತಾರೆಂಬ ನಂಬಿಕೆಗಳಿದ್ದವು. ಏಪ್ರಿಲ್ 21ರ ವೇಳೆಗೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 57,200 ರೂ.ಗಳಷ್ಟಿತ್ತು.
ಕಳೆದ ಎರಡು ದಿನಗಳಿಂದ ಚಿನ್ನದ ಖರೀದಿ ಉತ್ತಮವಾಗಿದೆ. ಅಗತ್ಯಗಳಿಗೆ ಅನುಗುಣವಾಗಿ ಜನರು ಖರೀದಿ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ಮಾರಾಟ ಉತ್ತಮವಾಗಿದೆ. ಅಕ್ಷಯ ತೃತೀಯ ದಿನದಂದು ಜನರು ಚಿನ್ನದ ಬೆಲೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸಣ್ಣದಾದರೂ ಏನಾದರೂ ಖರೀದಿ ಮಾಡಬೇಕೆಂದು ಮಳಿಗೆಗೆ ಬರುತ್ತಾರಂದು ಜೋಯಾಲುಕ್ಕಾಸ್‌ನ ಪ್ರಣೀತ್ ಎಂಬುವರು ಹೇಳಿದ್ದಾರೆ.
ಜಯನಗರದ ಶಾಂತಿ ಗೋಲ್ಡ್ ಆ್ಯಂಡ್ ಸಿಲ್ವರ್ ಎಂಬ ಆಭರಣ ಮಳಿಗೆಯ ಮಾಲೀಕರು ಮಾತನಾಡಿ, ಮಧ್ಯಮ ವರ್ಗದ ಜನರು ಮತ್ತು ಅದಕ್ಕಿಂತ ಕೆಳಗಿರುವ ಜನರು ಚಿನ್ನ ಖರೀದಿ ಮಾಡಲು ಹಿಂಜರಿಯುತ್ತಿರುವುದು ಕಂಡು ಬರುತ್ತಿದೆ. ಈ ಬಾರಿಯ ಅಕ್ಷಯ ತೃತೀಯ ದಿನದಂದು ಅತ್ಯಂತ ಕಡಿಮೆ ವ್ಯವಹಾರಗಳು ನಡೆದಿವೆ ಎಂದು ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಮಹಾಲಕ್ಷ್ಮಿ ಗೋಲ್ಡ್ ಪ್ಯಾಲೇಸ್ನಲ್ಲಿ ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಚಿನ್ನದ ವ್ಯಾಪಾರ ಉತ್ತಮವಾಗಿತ್ತು. ಈ ಬಾರಿ ಹಬ್ಬವನ್ನು ಏಪ್ರಿಲ್ 22-23 ರಂದು ಆಚರಿಸಲಾಗಿತ್ತು. ಗ್ರಾಹಕರು ಹೆಚ್ಚಾಗಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು, ಸರಗಳು, ಬಳೆಗಳು ಮತ್ತು ಕಿವಿಯೋಲೆಗಳು ಸೇರಿದಂತೆ ಸಣ್ಣ ಪ್ರಮಾಣದ ಚಿನ್ನವನ್ನು ಖರೀದಿ ಮಾಡಿದರು ಎಂದು ಮಾಲೀಕರು ಹೇಳಿದ್ದಾರೆ.