ಶಿವಮೊಗ್ಗ: ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಕರೆ ಮಾಡಿ ಚುನಾವಣೆಯಿಂದ ಹಿಂದಕ್ಕೆ ಸರಿಯುವಂತೆ ಮನವಿ ಮಾಡಿದ್ದಾರೆ.ಈ ವೇಳೆ ನಾನು ಅವರ ಮುಂದೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿರುವೆ. ಅಲ್ಲದೇ ಅವರು ಬುಧವಾರ ದಿಲ್ಲಿಗೆ ಬರುವಂತೆ ಸೂಚಿಸಿರುವುದಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮಿತ್ ಶಾ ಅವರು ದೂರವಾಣಿ ಕರೆ ಮಾಡಿ ಪಕ್ಷದ ಹಿರಿಯರಿದ್ದೀರಿ, ನೀವು ಸ್ಪರ್ಧೆ ಮಾಡುವುದು ಆಶ್ಚರ್ಯ ತಂದಿದೆ ಎಂದರು. ಅದಕ್ಕೆ ಸ್ಪಷ್ಟವಾಗಿ ಹೇಳಿದ್ದೇನೆ. ಒಂದು ಕುಟುಂಬದ ಕೈಯಲ್ಲಿ ಪಕ್ಷವಿದೆ. ಅದನ್ನು ಮುಕ್ತಿಗೊಳಿಸಬೇಕೆಂದು ಮೋದಿ ಅವರು ಯಾವ ಅಪೇಕ್ಷೆ ವ್ಯಕ್ತಪಡಿಸಿದ್ದಾರೋ ಅದಕ್ಕೆ ವಿರುದ್ಧವಾದಂತ ರೀತಿಯಲ್ಲಿ ನಮ್ಮ ರಾಜ್ಯದಲ್ಲಿ ಕೂಡ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಬೆಳೆಯುತ್ತಿದೆ. ಅಪ್ಪ-ಮಕ್ಕಳ ಕೈಯಲ್ಲಿ ಪಕ್ಷ ಹೋಗಿರುವುದು ತುಂಬಾ ಅನ್ಯಾಯ. ಇದರಿಂದ ಕಾರ್ಯಕರ್ತರಿಗೆ ನೋವಾಗಿದೆ ಎಂದು ತಿಳಿಸಿದ್ದೇನೆ ಎಂದರು.
ಅಪ್ಪ ಮಕ್ಕಳ ವಿರುದ್ಧ ಒಂದು ಪಕ್ಷದ ವ್ಯವಸ್ಥೆಯನ್ನು ಮುಕ್ತಿಗೊಳಿಸಬೇಕು. ಪಕ್ಷವನ್ನು ಕಟ್ಟಿದವರು ಮತ್ತು ಕಟ್ಟದೇ ಇರುವವರಿಗೆ ಸಮಾಧಾನ ಆಗಬೇಕು. ಹಿಂದುತ್ವಕ್ಕೆ ಸರಿಯಾದ ಬೆಲೆ ಸಿಗಬೇಕು. ಹಿಂದುಳಿದವರಿಗೆ ಏಕೆ ಮೋಸ ಮಾಡುತ್ತಿದ್ದೀರಿ ಎಂಬ ಮಾತು ಸಹ ನಾನು ಅಮಿತ್ ಶಾ ಅವರಿಗೆ ಹೇಳಿದ್ದೇನೆ. ಹಿಂದುಳಿದವರ ಬಗ್ಗೆ, ದಲಿತರ ಬಗ್ಗೆ ಮತ್ತು ಪಕ್ಷದಲ್ಲಿ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂಬ ಉದ್ದೇಶದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಅವರಿಗೆ ಹೇಳಿದ್ದೇನೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿ:
ಅಮಿತ್ ಶಾ, ನೀವು ಚುನಾವಣೆಗೆ ಸ್ಪರ್ಧಿಸಬೇಡಿ. ಅವುಗಳನ್ನು ಮುಂದೆ ಮಾಡೋಣ ಎಂದು ಹೇಳಿದ್ದಾರೆ. ಆದರೆ, ನಾನು ದಿಲ್ಲಿಗೆ ಬಂದಾಗ ನನಗೆ ಚುನಾವಣೆಯಿಂದ ಹಿಂದೆ ಸರಿಯುವಂತೆ ಹೇಳುವಂತಿಲ್ಲ ಎಂದು ಹೇಳಿದ್ದೇನೆ. ಮಗನ ವಿಷಯ ಕೂಡ ಪ್ರಸ್ತಾಪಿಸಿದರು. ಅದಕ್ಕೆ ನಾನು ನನ್ನ ಮಗನ ಜೊತೆ ಮಾತನಾಡಿರುವೆ. ನಾಳೆಯೇ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದರೆ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಇ.ವಿಶ್ವಾಸ್, ಏಳುಮಲೈ, ಲತಾ ಗಣೇಶ್, ಶಂಕರ್ ಗನ್ನಿ, ಆರ್.ಕೆ.ಪ್ರಕಾಶ್, ಲಕ್ಷ್ಮಿ ನಾಯಕ್, ರಮೇಶ್, ರಾಜು, ಶಂಕರ್ ನಾಯ್ಕ್ , ಭೂಪಾಲ್ ಕುಮಾರ್, ಶ್ರೀಕಾಂತ್, ಜಾಧವ್ ಮತ್ತಿತರರು ಇದ್ದರು.