ಬೆಂಗಳೂರು: ‘ಡಿಜಿಟಲ್ ಅರೆಸ್ಟ್’ ಎಂಬಂತಹ ಯಾವುದೇ ವ್ಯವಸ್ಥೆ ಭಾರತದಲ್ಲಿಲ್ಲ ಎಂದು ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಪಡೆ ಮುಖ್ಯಸ್ಥರಾದ ಡಾ. ಎಂ.ಎ. ಸಲೀಂ, ಐಪಿಎಸ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸೈಬರ್ ಅಪರಾಧಿಗಳು ಪೊಲೀಸ್ ಅಥವಾ ಇತರೆ ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ ವೀಡಿಯೊ ಕಾಲ್ ಮೂಲಕ ಜನರನ್ನು ಸಂಪರ್ಕಿಸಿ, ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಅಥವಾ ಬಂಧನ ಮಾಡಲಾಗುತ್ತದೆ ಎಂದು ಬೆದರಿಸಿ ಹಣ ವಸೂಲು ಮಾಡಲು ಪ್ರಯತ್ನಿಸುತ್ತಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ಪೊಲೀಸರು ಯಾವತ್ತೂ ವೀಡಿಯೊ ಕಾಲ್ ಮೂಲಕ ಬಂಧನ ಮಾಡುವುದಿಲ್ಲ. ಅಂತಹ ಕರೆಗಳು ಬಂದರೆ ತಕ್ಷಣ ನಂಬದೆ ಕರೆ ಕಡಿತಗೊಳಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಪೊಲೀಸ್ ಇಲಾಖೆಯಿಂದ ಬಂದಿದೆ ಎಂದು ಹೇಳಿ ಹಣ ಕೇಳುವ ವೀಡಿಯೊ ಕಾಲ್ ಅಥವಾ ಸಂದೇಶಗಳು ಬಂದರೆ ಅದು ಸೈಬರ್ ಮೋಸವಾಗಿರುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇಂತಹ ಮೋಸ ಪ್ರಯತ್ನಗಳ ಬಗ್ಗೆ ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಂ ಹೆಲ್ಪ್ಲೈನ್ 1930 ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ನಾಗರಿಕರಿಗೆ ಸೂಚಿಸಲಾಗಿದೆ.
ಸೈಬರ್ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಅತ್ಯಂತ ಮುಖ್ಯವಾಗಿದ್ದು, ಈ ಮಾಹಿತಿ ಎಲ್ಲರಿಗೂ ಹಂಚಿಕೊಳ್ಳುವಂತೆ ಕರ್ನಾಟಕ ಪೊಲೀಸರು ಮನವಿ ಮಾಡಿದ್ದಾರೆ.
