Home Uncategorized ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ: 6,407 ಕೋಟಿ ರೂ.ಬಂಡವಾಳ ಹೂಡಿಕೆಯ 128 ಯೋಜನೆಗಳಿಗೆ ಅನುಮೋದನೆ

ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ: 6,407 ಕೋಟಿ ರೂ.ಬಂಡವಾಳ ಹೂಡಿಕೆಯ 128 ಯೋಜನೆಗಳಿಗೆ ಅನುಮೋದನೆ

16
0

ಬೆಂಗಳೂರು: ರಾಜ್ಯಾದ್ಯಂತ ಕೈಗಾರಿಕಾ ಬೆಳವಣಿಗೆ ಉತ್ತೇಜಿಸಲು ಮತ್ತು ಉದ್ಯೋಗ ಸೃಷ್ಟಿಸಲು ಶಿಕ್ಷಣ-ಸಂಶೋಧನಾ ಸಂಸ್ಥೆಗಳ ಸ್ಥಾಪನೆ, ಉಗ್ರಾಣ, ಶೈತ್ಯಾಗಾರಗಳ ನಿರ್ಮಾಣ, ವಾಹನ ಬಿಡಿಭಾಗ, ಪಿವಿಸಿ ಪೈಪ್ ತಯಾರಿಕೆ ಸೇರಿದಂತೆ ಒಟ್ಟು 6,407  ಕೋಟಿ ರೂ.ಬಂಡವಾಳ ಮೊತ್ತದ ಹೂಡಿಕೆಯ ಪ್ರಸ್ತಾವಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು ಅನುಮೋದನೆ ನೀಡಿದೆ.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ 143ನೆ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಟ್ಟು 6407.82 ಕೋಟಿ ರೂ.ಬಂಡವಾಳ ಮೊತ್ತದ ಹೂಡಿಕೆಯ 128 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ 33,771 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ತಿಳಿಸಲಾಗಿದೆ.

ಬೆಂಗಳೂರು ಗ್ರಾಮಾಂತರ, ಬೆಳಗಾವಿ, ರಾಮನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆಯ ವಿವಿಧ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 485 ಕೋಟಿ ರೂ. ಬಂಡವಾಳದ ಯಾಂತ್ರಿಕೃತ ಎರಕಹೊಯ್ಯುವ ಘಟಕ ಸ್ಥಾಪನೆ, ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 484.33 ಕೋಟಿ ರೂ. ಮೊತ್ತದ ವಿಜ್ಞಾನ, ತಂತ್ರಜ್ಞಾನ ಸಂಶೋಧನೆ ಹಾಗೂ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ, ಮೈಸೂರು ಜಿಲ್ಲೆಯಲ್ಲಿ 415 ಕೋಟಿ ರೂ.ಮೊತ್ತದ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ನ ಶಿಕ್ಷಣ ವಿಶ್ವ ವಿದ್ಯಾಲಯ ಸ್ಥಾಪನೆ ಮುಂತಾದವು ಸೇರಿವೆ.

50 ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ಹೂಡಿಕೆಯ 22 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ 4,230.64 ಕೋಟಿ ರೂ.ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 24,846 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. 15 ಕೋಟಿ ರೂ.ಗಳಿಂದ 50 ಕೋಟಿ ರೂ.ಒಳಗಿನ ಮೊತ್ತದ ಬಂಡವಾಳ ಹೂಡಿಕೆಯ 104 ಹೊಸ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಂದ 2056.68 ಕೋಟಿ ರೂ.ಬಂಡವಾಳ ಹೂಡಿಕೆಯೊಂದಿಗೆ 8,425 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ.

ಹೆಚ್ಚುವರಿ ಬಂಡವಾಳ ಹೂಡಿಕೆಯ 2 ಯೋಜನೆಗಳಿಗೆ ಸಭೆಯು ಅನುಮೋದಿಸಿದ್ದು ಇದರಿಂದ 120.50 ಕೋಟಿ ರೂ.ಬಂಡವಾಳ ಹೂಡಿಕೆ ಆಗಲಿದ್ದು, 500 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.

ಸಭೆಯಲ್ಲಿ ಸರಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಿಇಒ ಡಾ.ಎನ್.ಮಹೇಶ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here