Bengaluru: Violation of traffic rules more than 300 times, Rs 3.22 lakh penalty| 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘನೆ: ಸ್ಕೂಟರ್ ಮಾಲಕನಿಗೆ 3.22 ಲಕ್ಷ ರೂ. ದಂಡ, ದಂಡ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿದ ವಾಹನ ಸವಾರ
ಬೆಂಗಳೂರು: ದ್ವಿಚಕ್ರ ವಾಹನ ಸವಾರನೊಬ್ಬ 300ಕ್ಕೂ ಅಧಿಕ ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣ ಸಂಬಂಧ ಆತನಿಗೆ ಬರೋಬರಿ 3.20ಲಕ್ಷ ರೂಪಾಯಿ ದಂಡ ಹಾಕಲಾಗಿದೆ ಎಂದು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಸುಧಾಮನಗರ ನಿವಾಸಿ ವೆಂಕಟರಾಮನ್ ಎಂಬುವರ ಹೋಂಡಾ ಆ್ಯಕ್ಟಿವಾ ಸ್ಕೂಟರಿನ ಮೇಲೆ 300ಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿದ್ದವು. ಎಸ್.ಆರ್.ನಗರ, ವಿಲ್ಸನ್ ಗಾರ್ಡನ್ ನಗರದ ವಿವಿಧ ಪ್ರದೇಶಗಳಲ್ಲಿ ಹೆಲ್ಮೆಟ್ ಧರಿಸದೇ, ಸಿಗ್ನಲ್ ಜಂಪ್ ಮಾಡಿರುವ, ಒನ್ ವೇಯಲ್ಲಿ ಸ್ಕೂಟರ್ ಚಲಾಯಿಸಿರುವ, ಚಾಲನೆ ವೇಳೆ ಮೊಬೈಲ್ನಲ್ಲಿ ಮಾತಾಡಿರುವ ಪ್ರಕರಣಗಳಲ್ಲಿ ಪೊಲೀಸರು ದಂಡ ವಿಧಿಸಿರುವುದಾಗಿ ಹೇಳಿದ್ದಾರೆ.


ವೆಂಕಟರಾಮನ್ ಅವರ ಮನೆಗೆ ಶನಿವಾರ ಸಂಚಾರಿ ಪೊಲೀಸರು ತೆರಳಿ ದಂಡ ಪಾವತಿಸುವಂತೆ ಸೂಚಿಸಿದ್ದು, ಈ ವೇಳೆ 3.20 ಲಕ್ಷ ರೂ. ದಂಡ ಪಾವತಿಸಲು ಸಾಧ್ಯವಿಲ್ಲ, ಬೇಕಿದ್ದರೆ ಸ್ಕೂಟರ್ ತೆಗೆದುಕೊಂಡು ಹೋಗಿ ಎಂಬುದಾಗಿ ವೆಂಕಟರಾಮನ್ ತಿಳಿಸಿದ್ದಾರೆ. ಆದರೆ, ಸ್ಕೂಟರ್ ಬೇಡ, ದಂಡ ಪಾವತಿಸಿ, ಇಲ್ಲವಾದರೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನ ಸವಾರನಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.