ಬೆಂಗಳೂರು: ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ನೋಂದಣಿಗಾಗಿ ಹಾಗೂ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳಿಗಾಗಿ ವೃತ್ತಿಪರ ನಡತೆಯ ಮಾನಕಗಳನ್ನು ಮತ್ತು ನೈತಿಕತೆ ಹಾಗೂ ನೀತಿ ನಿಯಮಗಳ ಸಂಹಿತೆಯನ್ನು ರೂಪಿಸಲು ‘ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ಪರಿಷತ್ತು’ ರಚಿಸಲು ಉದ್ದೇಶಿಸಿರುವ ‘2024ನೆ ಸಾಲಿನ ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ವಿಧೇಯಕ’ಕ್ಕೆ ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿತು.
ರಾಜ್ಯದಲ್ಲಿ ವೃತ್ತಿ ನಡೆಸಲು ಉದ್ದೇಶೀಸಿರುವ ಪ್ರತಿಯೊಬ್ಬ ಸಿವಿಲ್ ಇಂಜಿನಿಯರ್, ಈ ಅಧಿನಿಯಮ ಪ್ರಾರಂಭವಾದ ದಿನಾಂಕದಿಂದ ಒಂದು ವರ್ಷದೊಳಗೆ ಪರಿಷತ್ತು ನಿರ್ವಹಿಸಿದ ರಿಜಿಸ್ಟರ್ ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ವಿಧೇಯಕ ಮಂಡನೆ ಮಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ವಿವರಿಸಿದರು.
ಹೆಸರನ್ನು ನಮೂದಿಸಿಕೊಳ್ಳದೆ ವೃತ್ತಿಪರ ಸಿವಿಲ್ ಇಂಜಿನಿಯರ್ ಆಗಿ ವೃತ್ತಿಯನ್ನು ಕೈಗೊಂಡ ವ್ಯಕ್ತಿಗೆ ಆರು ತಿಂಗಳುಗಳಿಗೆ ವಿಸ್ತರಿಸಬಹುದಾದ ಕಾರವಾಸ ಅಥವಾ 50 ಸಾವಿರ ರೂ.ಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆ ವಿಧಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಪೊಲೀಸು(ತಿದ್ದುಪಡಿ) ವಿಧೇಯಕ ಅಂಗೀಕಾರ
ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳ ಕನಿಷ್ಠ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿರುವ 2024ನೆ ಸಾಲಿನ ಕರ್ನಾಟಕ ಪೊಲೀಸು(ತಿದ್ದುಪಡಿ) ವಿಧೇಯಕಕ್ಕೆ ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿತು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಡನೆ ಮಾಡಿದ ವಿಧೇಯಕವನ್ನು ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ಹಿರಿಯ ಸದಸ್ಯರಾದ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ಸೇರಿದಂತೆ ಇನ್ನಿತರು ಸ್ವಾಗತಿಸಿ ಮಾತನಾಡಿದರು.
ವಿಧೇಯಕಗಳಿಗೆ ಅಂಗೀಕಾರ
2024ನೆ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ)(ತಿದ್ದುಪಡಿ) ವಿಧೇಯಕ, ಕರ್ನಾಟಕ ಸ್ಟಾಂಪು(ತಿದ್ದುಪಡಿ) ವಿಧೇಯಕ, ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ(ತಿದ್ದುಪಡಿ) ವಿಧೇಯಕ, ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕಗಳಿಗೆ ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿತು.