Home Uncategorized ಕೃಷಿಯೂ ಚರಿತ್ರೆಯಾಗುವುದು ಎಂದು?

ಕೃಷಿಯೂ ಚರಿತ್ರೆಯಾಗುವುದು ಎಂದು?

3
0

ಕೃಷಿಯಲ್ಲಿ ಒಂದು ಚರಿತ್ರೆ ಅಥವಾ ಕೃಷಿಯೂ ಒಂದು ಚರಿತ್ರೆಯಾಗುವುದು ಯಾವಾಗ? ಯಾರಿಂದ ? ಎಂಬುದೊಂದು ಬಹುಮುಖ್ಯ ಪ್ರಶ್ನೆ . ನಾಗರಿಕ ಜಗತ್ತಿನಿಂದ ಬಹುದೂರವಿರುವ ನಮ್ಮ ರೈತರ ಶ್ರಮ, ಬೆವರು, ಪ್ರಯೋಗ? ಪ್ರಯತ್ನ ಇತಿಹಾಸ ಸೇರದಿರಬಹುದು. ಈ ದೇಶದ ದೇವಾಲಯ, ಮಂದಿರ, ಮಸೀದಿ, ಚರ್ಚ್ ಸ್ಥಾವರಗಳನ್ನೊಮ್ಮೆ ಗಮನಿಸಿ. ಅವುಗಳ ಪಾಯದ ಮೇಲೆ ಕಟ್ಟಿಸಿದವರ ಕತೆಗಳಿರುತ್ತವೆ. ಅನ್ನಶೋಧಕರು ಸಾಮ್ರಾಜ್ಯ ಕಟ್ಟಿದ ಕಥೆ ಎಲ್ಲೂ ಕಾಣಿಸುವುದಿಲ್ಲ. ಈ ಜಗತ್ತಿನ ಪ್ರತಿಯೊಬ್ಬರ ಹೊಟ್ಟೆ ತುಂಬಿಸಿದವರು ಈವರೆಗೆ ಮಣ್ಣಿನಲ್ಲಿ ಬರೆದ ಹಸಿರು ಬೇರುಕಥೆ ಅಜ್ಞಾತವಾಗಿಯೇ ಉಳಿದಿದೆ. ಅದನ್ನು ಶೋಧಿಸಿದರೆ – ದಾಖಲಿಸಿದರೆ ಪ್ರತಿದಿನ ನಮ್ಮ ಮನೆಯಲ್ಲಿ ಅನ್ನ ಉಣ್ಣುವಾಗಲೆಲ್ಲ ಅದನ್ನು ನೆನಪಿಸಿಕೊಂಡರೆ ಎಷ್ಟು ಚಂದ ಅಲ್ವಾ?

                                                                        **********

ಲಕ್ಷಲಕ್ಷ ವರ್ಷಗಳ ಹಿಂದೆ ಈ ಭೂಮಿಯಲ್ಲಿರುವ ಅಸಂಖ್ಯ ಗಿಡಗಂಟಿಗಳಿಂದ, ನಾರುಬೇರುಗಳಿಂದ, ಹೂವು ಹಣ್ಣುಗಳ ರಾಶಿಯಿಂದ ಹೆಕ್ಕಿಹೆಕ್ಕಿ ಇದು ತಿನ್ನುವಂಥದ್ದು, ಇದು ತಿನ್ನಲಾಗದ್ದು, ಇದು ವಿಷ, ಇದು ಕಹಿ, ಇದನ್ನು ಬೇಯಿಸಿ ತಿನ್ನಬಹುದು, ಇದಕ್ಕೆ ಉಪ್ಪು-ಹುಳಿ-ಖಾರ ಸೇರಿಸಬೇಕು, ಇದನ್ನು ಹಸಿಯಾಗಿಯೇ ತಿನ್ನಬಹುದು. ಇದು ನಂಜಿ, ಇದು ಉಷ್ಣ,…. ಹೀಗೆಲ್ಲ ಪತ್ತೆ ಮಾಡಿ, ಬಳಸಿ ತೋರಿಸಿದವರು ವಿಶ್ವವಿದ್ಯಾನಿಲಯಗಳಲ್ಲಿ ಓದಿದವರಲ್ಲ. ಬೀಜಶಾಸ್ತ್ರ, ಸಸ್ಯ ವಿಜ್ಞಾನಗಳನ್ನು ಅಧ್ಯಯನ ಮಾಡಿದವರಲ್ಲ. ಪ್ರತೀ ಹಣ್ಣು, ಎಲೆ, ಚಿಗುರುಗಳನ್ನು ಲ್ಯಾಬ್ಗೆ ಒಯ್ದು ಪರೀಕ್ಷಿಸಿದವರಲ್ಲ. ಕಾಡಿಂದ ಅವುಗಳನ್ನೆಲ್ಲ ಬಗೆದು ಊರು, ನಾಡು ಕಟ್ಟಿಕೊಂಡ ಈ ರೈತರು ಅನ್ನದ ದಾರಿಯಲ್ಲಿ ಸಾಗಿದ, ಬೆಳಗದೆ ಕತೆಗಳು ಎಲ್ಲಿ ದಾಖಲಾಗಿದೆ ಹೇಳಿ?

ಯಾವ ಗಿಡದ ಬೀಜವನ್ನು ಹೇಗೆ ಬಿತ್ತಬೇಕು? ಯಾವ ಬಳ್ಳಿಯನ್ನು ಹೇಗೆ ನೆಡಬೇಕು? ಬುಡಕ್ಕೆ ಗೊಬ್ಬರ- ನೀರಾವರಿ – ಪೋಷಣೆ – ಕೊಯ್ಲು ಧಾನ್ಯರಕ್ಷಣೆ ಇವುಗಳ ಹಿಂದಿರುವ ವಿಜ್ಞಾನ – ನಾಟಿ ಜ್ಞಾನ ನೆಲದಿಂದಲೇ ಬಂದದ್ದು. ನಮ್ಮ ರೈತರೇ ತಲೆಮಾರಿನಿಂದ ತಲೆಮಾರಿಗೆ ದಾಟಿಸಿಕೊಂಡು ಬಂದದ್ದು. ಇತ್ತೀಚೆಗಷ್ಟೇ ಅವುಗಳ ಮೇಲೆ ವಿಜ್ಞಾನ – ವಿಶ್ವವಿದ್ಯಾನಿಲಯದ ರಂಗು ಮೆತ್ತಿರಬಹುದು. ಆದರೆ ಮೂಲತಃ ಅದು ನಮ್ಮ ನೆಲದವರ ನಾಟಿ ಜ್ಞಾನದ ಫಲವೆಂಬುವುದು ಮಹತ್ವದ ಸಂಗತಿ.

ನಮ್ಮಲ್ಲಿಂದು ಅನ್ನದಿಂದ ಮೊಸರನ್ನ ಮಾಡುವ, ಚಿತ್ರಾನ್ನ ಮಾಡುವ, ಬಿರಿಯಾನಿ ಮಾಡುವ ಪುಸ್ತಕಗಳನ್ನು ಬರೆದರೆ ಅವುಗಳು ಮಸಾಲೆ ದೋಸೆಯಂತೆ ಮಾರಾಟವಾಗುತ್ತವೆ. ಆದರೆ ಅದೇ ಚಿತ್ರಾನ್ನ, ಮೊಸರನ್ನದ ಮೂಲ ಅಕ್ಕಿ ಅನ್ನದ ಬಗ್ಗೆ ಬರೆದರೆ ಅವುಗಳನ್ನು ಓದುವವರಿಲ್ಲ. ಬಿತ್ತುವ ಬೀಜ ಅನ್ನವಾಗಿ ಪರಿವರ್ತನೆಯಾಗುವ ದಾರಿಯಲ್ಲಿ ನಮ್ಮ ಹಿರಿಯರು ನಡೆಸಿದ ಶೋಧನೆ ಕಡಿಮೆಯಿಲ್ಲ. ಅನ್ನದ ದಾರಿಯಲ್ಲಿ ಸಾಗಿದ ಅವರು ಇವತ್ತು ನಾಗರಿಕತೆಯನ್ನು ತಲುಪಿರಬಹುದು. ಆದರೆ ಅವರು ದಾಖಲಿಸಿದ ಹೆಜ್ಜೆ ಗುರುತುಗಳು, ಕ್ರಿಯಾಶೀಲತೆ, ವ್ಯಯಿಸಿದ ಜ್ಞಾನ ಅವೆಲ್ಲ ದಾಖಲಾಗಿಲ್ಲ.

ಈ ದೇಶದೆಲ್ಲೆಡೆ ರಾಜಕಾರಣಿಗಳ ಸ್ವಾತಂತ್ರ್ಯ ಹೋರಾಟಗಾರರ ಸಮಾಜ ಸುಧಾರಕರ ಕವಿ – ಕಲಾವಿದರ, ಸಮಾಜ ವಿಜ್ಞಾನಿಗಳ, ಶಿಕ್ಷಕ ಸಾಧಕರ ಸಾವಿರಾರು ಪ್ರತಿಮೆಗಳನ್ನು ಅಲ್ಲಲ್ಲಿ ನಿಲ್ಲಿಸಿ ಗೌರವಿಸಲಾಗುತ್ತದೆ. ಪ್ರತೀ ವರ್ಷ ಆ ಸಾಧಕರ ಜಯಂತಿಯನ್ನು ಆಚರಿಸ ಲಾಗುತ್ತದೆ. ಅವರ ಬದುಕು ಸಾಧನೆಯನ್ನು ಮೆಲುಕು ಹಾಕಲಾಗುತ್ತದೆ. ಚರಿತ್ರೆಯ ಶಾಲಾಪಠ್ಯಗಳಿಗೆ ಅವರ ಬದುಕಿನ ಪುಟಗಳನ್ನು ಸೇರಿಸಲಾಗುತ್ತದೆ. ಅವರ ಬಗ್ಗೆ ಮತ್ತೆ ಮತ್ತೆ ಸಂಶೋಧನೆಗಳನ್ನು ನಡೆಸಲಾಗುತ್ತದೆ, ಸೆಮಿನಾರ್ ಸಂವಾದಗಳನ್ನು ಏರ್ಪಡಿಸಲಾಗುತ್ತದೆ.

ಆದರೆ ಈ ಮೇಲಿನವರು ಸೇರಿ ಈ ದೇಶದ ಪ್ರತಿಯೊಬ್ಬರ ಹೊಟ್ಟೆತುಂಬುವ ರೈತರ ಒಂದೇ ಒಂದು ಪ್ರತಿಮೆಯನ್ನು ನೀವು ಎಲ್ಲಾದರೂ ನೋಡಿದ್ದೀರಾ? ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಮ್ಮೆ ಪ್ರವಾಸ ಮಾಡಿ ಬನ್ನಿ. ದೇಶದ ಉದ್ದಗಲಕ್ಕೂ ಸಾವಿರಾರು ಪ್ರತಿಮೆಗಳನ್ನು ಗಮನಿಸಬಹುದು. ಆದರೆ ಒಬ್ಬನೇ ಒಬ್ಬ ರೈತನ ಪ್ರತಿಮೆಯನ್ನು ನಾನು ಈ ದೇಶದ ಎಲ್ಲೂ ನೋಡಿಲ್ಲ? ಈ ದೇಶದ ಎಷ್ಟು ರೈತರ ಯಶೋಗಾಥೆ ಭಾರತದ ಚರಿತ್ರೆಯ ಪುಟ ಸೇರಿದೆ? ತಿನ್ನುವ ಅನ್ನ ಹೇಗೆ ಎಲ್ಲಿಂದ ಯಾರಿಂದ ಹುಟ್ಟುತ್ತದೆ? ಅದಕ್ಕೆ ಅಂಟಿಕೊಂಡ ಶ್ರಮ ಬೆವರಿನ ಕಥೆ ಎಷ್ಟು ಮಂದಿಗೆ ಗೊತ್ತಿದೆ? ರೈತರ ಕಥಾನಕ ಮಕ್ಕಳ ಶಾಲಾ ಪಠ್ಯಕ್ಕೆ ಯಾಕೆ ಇನ್ನೂ ಸೇರಿಲ್ಲ? ಇಂತಹ ಅನೇಕ ಪ್ರಶ್ನೆಗಳನ್ನು ಇಟ್ಟುಕೊಂಡು ನಾನೀಗ ರೈತರ ಜೀವನ ಕಥೆಗಳನ್ನು ಬರೆಯಲು ತೊಡಗಿದ್ದೇನೆ.

ಈ ದೇಶದಲ್ಲಿ ಅತ್ಯಂತ ಹೆಚ್ಚು ಅವಮಾನಕ್ಕೆ ಒಳಗಾದವರು ರೈತರು. ನಿಮಗೆ ಗೊತ್ತಿರಲಿ. ರೈತ ಕುಲದಲ್ಲಿ ಗರಿಷ್ಠ ಪ್ರಮಾಣದಲ್ಲಿಂದು ‘ಹೊಂದಾಣಿಕೆಯ ಸಾವು’ ನಡೆಯುತ್ತಿದೆ. ಕೂಡುಸಾವು ಎಂದರೆ ಸಾಲ ಸೇರಿಸಲಾರದ ಯಜಮಾನ ಅವಮಾನಕ್ಕೆ ಒಳಗಾಗಿ ಪೇಟೆ ಯಿಂದ ಮನೆಗೆ ಬರುವಾಗ ವಿಷ ಖರೀದಿಸಿ ತಂದು ಹೆಂಡತಿಯನ್ನು ಒಪ್ಪಿಸಿ ಪ್ರಪಂಚ ಜ್ಞಾನವೇ ಇಲ್ಲದ ಇಬ್ಬರು, ಮೂವರು ಮಕ್ಕಳನ್ನು ಕೂರಿಸಿಕೊಂಡು ಎಲ್ಲರೂ ಸೇರಿ ವಿಷ ಕುಡಿದು ಸಾಯುವ ಆತ್ಮಹತ್ಯೆಯ ಪ್ರಸಂಗ. ಇದು ನಮ್ಮ ದೇಶದಲ್ಲಿ ರೈತರಲ್ಲಿ ಹೆಚ್ಚು ಕಂಡು ಬಂದದ್ದನ್ನು ನಾನು ಕಂಡಿದ್ದೇನೆ. ಬ್ಯಾಂಕಿನ ಮ್ಯಾನೇಜರ್ರೊಬ್ಬರು ರೈತನೊಬ್ಬ ಪಡೆದ ಬರೀ 5,000 ರೂ. ಸಾಲವನ್ನು ಯಾಕೆ ಇನ್ನೂ ಕಟ್ಟಿಲ್ಲ ಎಂದು ಗದರಿಸಿದ್ದನ್ನು ಪಕ್ಕದ ಮನೆ ಹೆಂಗಸು ಕಿಟಕಿಯಲ್ಲಿ ಕಂಡು ನಕ್ಕಿದ್ದಾಳೆ ಎಂದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡದ್ದನ್ನು ನಾನು ಓದಿದ್ದೇನೆ.

ಮಾನ- ಅವಮಾನವನ್ನು ಗಂಭೀರವಾಗಿ ಸ್ವೀಕರಿಸುವ ಭಾರತದ ರೈತ ಕುಲ ಅಥವಾ ನಮ್ಮದೇ ಮನೆಯ ಹಿರಿಯರು ರೈತರಾಗಿ ಅನುಭವಿಸಿದ ಶೋಷಣೆ ಅವಮಾನದ ಲೆಕ್ಕ ನಮ್ಮಲ್ಲಿ ದಾಖಲಾಗಬೇಕು. ಇಂಥ ಕೃತಿಯನ್ನು ನಮ್ಮ ಮನೆಯ ಹೊಸ ತಲೆಮಾರು, ಮಕ್ಕಳು ಪಠ್ಯದಲ್ಲಿ ಓದುವ; ಆ ತಲೆಮಾರು ಇಂಥ ನೋವು ಸಂಕಷ್ಟಗಳಿಗೆ ಮುಖಾಮುಖಿಯಾದಾಗ ನಿಜವಾದ ಅನ್ನದ ದಾರಿಯ ಅರಿವಾಗುತ್ತದೆ.

ನಾವು ನಮ್ಮ ಮಕ್ಕಳು ಈ ದೇಶದ ಚರಿತ್ರೆಯ ಪುಟಗಳಲ್ಲಿ ಯುದ್ಧದ ಕಥೆಗಳನ್ನು ಓದುತ್ತೇವೆ. ಸಾಮ್ರಾಜ್ಯ ವಿಸ್ತರಣೆ, ತಲೆ ಉರುಳಿಸಿದ್ದು, ಸಿಂಹಾಸನ ವಶಪಡಿಸಿದ್ದು, ರಾಜ ರಾಣಿಯರ ಮದುವೆ ಎಲ್ಲವೂ ನಮಗೆ ಗೊತ್ತು. ಯುದ್ಧವೆಂದರೆ ಶಸ್ತ್ರ ವ್ಯೆಹ ರಕ್ತ ಹಿಂಸೆ ಇವುಗಳೇ ನಮಗೆ ನೆನಪಾಗುತ್ತದೆ. ಎಷ್ಟೋ ಸಲ ಅದಕ್ಕೆ ಸಮಾನಾಂತರವಾಗಿ ಮನೆಯಲ್ಲೂ, ಪಕ್ಕದ ಮನೆಯಲ್ಲೂ, ನಾವು ಬದುಕುವ ಹಳ್ಳಿಯಲ್ಲೂ ಇಂಥದ್ದೇ ಯುದ್ಧ ನಡೆದಿರುತ್ತದೆ. ಅದು ಹೊಟ್ಟೆಗೆ ಅನ್ನ ಸಂಪಾದಿಸುವುದು. ಹಸಿವೆಯನ್ನು ಸಹಿಸಿಕೊಳ್ಳುವುದು.

ಅನ್ನದ ಜೊತೆಗೆ ಮಾನವನ್ನು ಕಾಪಾಡಿಕೊಳ್ಳುವುದು. ನಿಜವಾದ ಅರ್ಥದಲ್ಲಿ ಬಡವರ ಮನೆಯಲ್ಲಿ ನಡೆಯುವ ಪ್ರತಿಕ್ಷಣದ ಯುದ್ಧಗಳಿವು.

ಸಾಲವನ್ನು ತೀರಿಸುವ ಪ್ರಯತ್ನ, ಆರ್ಥಿಕ ಸೂಕ್ಷ್ಮತೆಗಳು,ಬೆಳೆದ ಬೆಳೆಯಲ್ಲಿ ಅನ್ನ ಜೊತೆಗೆ ಮರ್ಯಾದೆಯನ್ನು ಹುಡುಕುವ ಸೂಕ್ಷ್ಮ ಪ್ರಯತ್ನಗಳು ಈ ದೇಶದ ಪ್ರತೀ ಬಡರೈತರ ಮನೆಯಲ್ಲಿ ನಡೆದೇ ನಡೆಯುತ್ತದೆ.ಎಷ್ಟೋ ಸಲ ನಾವು ಕಲ್ಪಿತ ಸಾಹಿತ್ಯದ ಒಳಗಡೆ ಅಥವಾ ಸತ್ಯಸಾಹಿತ್ಯದ ಒಳಗಡೆ ನಮ್ಮ ಬದುಕಿಗೆ ಸಂಬಂಧಪಟ್ಟ ಯಾವ್ಯಾವುದೇ ವಿಚಾರಗಳನ್ನು ಓದುತ್ತಿರುತ್ತೇವೆ. ಆದರೆ ನಿಜದ ಸಂಗತಿಗಳು ನಾವು ಗಮನಿಸುವುದೇ ಇಲ್ಲ.

ನೆಲಮೂಲದಿಂದ ಎದ್ದು ಬರುವ ಮಣ್ಣು ನೀರು ಅನ್ನಕ್ಕೆ ಸಂಬಂಧಪಟ್ಟ ಕಾಳಜಿ ಕಥೆಗಳು ನಮಗೀಗ ಬಹಳ ಅಗತ್ಯ. ಆಸ್ಪತ್ರೆಯಲ್ಲಿ ಹುಟ್ಟಿ, ಆಸ್ಪತ್ರೆಯಲ್ಲಿ ಬೆಳೆದು, ಆಸ್ಪತ್ರೆಯಲ್ಲೇ ಸಾಯುವ ಹೊಸ ತಲೆಮಾರನ್ನು ಸೃಷ್ಟಿಸುವ ಈ ದಿನಮಾನದಲ್ಲಿ ಕೃಷಿಯ ಮೂಲಕ ಭೂಮಿಯೊಂದಿಗೆ ಸಾವಯವ ಸಂಬಂಧವನ್ನು ಹೊಂದಿದ ಹಿರಿಯ ತಲೆಮಾರಿನ ಅನುಭವವನ್ನು ಬಗೆದು ಹೊಸ ತಲೆಮಾರಿಗೆ ದಾಟಿಸುವ ಅಗತ್ಯ ತುಂಬಾ ಇದೆ. ನಮಗೆಲ್ಲ ಗೊತ್ತಿರುವ ಹಾಗೆ ಸಹಜ ಗಾಳಿ, ಸಹಜ ನೀರು, ವಿಷ ಸೇರದ ಸಹಜ ಅನ್ನವನ್ನು ತಿಂದು ಬದುಕುವ ಕೊನೆಯ ತಲೆಮಾರು ನಮ್ಮ ಎದುರುಗಡೆಯೇ ಇದೆ.ಈ ಹಿನ್ನೆಲೆಯಲ್ಲಿ ಅನ್ನದಾರಿಯ ಸುಸ್ಥಿರತೆಯನ್ನು ಹುಡುಕುವ ಮುಂದಿನ ತಲೆಮಾರಿಗೆ ಭೂಮಿಯನ್ನು ಹಾಳು ಮಾಡದೆ ಹಸ್ತಾಂತರಿಸುವ ಒಂದಷ್ಟು ರೈತ ಕಥೆಗಳು ಪ್ರಕಟವಾಗಬೇಕು ಅನ್ನುವ ಉದ್ದೇಶದಿಂದ ನಾನು ರೈತರ ಜೀವನ ಚರಿತ್ರೆಯನ್ನು ನಿರೂಪಿಸುವ ಪ್ರಯತ್ನಕ್ಕೆ ತೊಡಗಿದೆ.

ನಾನು ಹೇಳ ಹೊರಟದ್ದು ಎಸ್ಟೇಟ್ ಮಾದರಿಯ, ಸಾವಿರಾರು ಹೆಕ್ಟೇರು ಭೂಮಿ ಹೊಂದಿರುವ ಶ್ರೀಮಂತ ರೈತರ ಕಥೆಯನ್ನಲ್ಲ. ನಿತ್ಯ ನಿರಂತರ ಮಣ್ಣಿಗಂಟಿಕೊಂಡು ಬೇರಿನ ಮೂಲ ತಿಳಿಯುವ ನಿಜವಾದ ರೈತರ ಕಥೆ. ನಾನೂ ಒಬ್ಬ ರೈತನಾಗಿ ಅವರ ಜೊತೆಗೆ ಒಂದೆರಡು ದಿನ ಇದ್ದು ಅವರನ್ನು ಅಗೆದುಬಗೆದು ನಾನೇ ಬರೆದು ನಾನೇ ಪ್ರಕಾಶಕನಾಗಿ ಇಂಥ ಪುಸ್ತಕಗಳನ್ನು ಪ್ರಕಟಿಸಲು ಆರಂಭಿಸಿದೆ. ಇದು ನನ್ನದೇ ಮೊದಲ ಪ್ರಯತ್ನವೆಂದು ಬೀಗಲಾರೆ. ಪರಿಸರ ಪರ ಬರಹಗಾರರು, ವಿಶ್ವವಿದ್ಯಾನಿಲಯಗಳು, ಅಧ್ಯಯನಗಳು ಬಿಡಿಬಿಡಿಯಾಗಿ ರೈತರ ಕಥೆಗಳನ್ನು ಬರೆದದ್ದೂ ಇದೆ. ಆದರೆ ಸರಣಿಯಾಗಿ ರೈತರನ್ನೇ ಉದ್ದೇಶಿಸಿ ಬರೆಯಲಾದ ಕಥನ ಮಾಲಿಕೆ ಇದೇ ಮೊದಲನೆಯದ್ದು ಎಂಬುವುದು ನನ್ನ ಹೆಮ್ಮೆ.

ಒಬ್ಬ ರೈತನಾಗಿ, ಪ್ರಾಧ್ಯಾಪಕನಾಗಿ ಪರಿಸರದ ಬಗ್ಗೆ ಕಾಳಜಿ ಇರುವ ಅದಕ್ಕಿಂತ ಹೆಚ್ಚು ಅನ್ನವನ್ನಷ್ಟೇ ತಿಂದು ಬದುಕುವ ನಾನು ರೈತ ಕಥೆಗಳನ್ನು ಆಯಬೇಕು ಎಂದು ಹೊರಟದ್ದು ನನ್ನ ಊರಿನಿಂದಲೇ. ಮೊದಲ ಬಾರಿಗೆ ಕರ್ನಾಟಕದ 10 ಜನ ರೈತರ ಕಥೆಗಳನ್ನು ದಾಖಲಿಸುವ ಎಂದು ನಾನು ಒಂದು ಪಟ್ಟಿ ಮಾಡಿಕೊಂಡೆ ಮತ್ತು ಅದು ನನ್ನ ಕರಾವಳಿಯಿಂದಲೇ ಆರಂಭವಾಗಲಿ ಎಂದು ಶುರು ಮಾಡಿದೆ. ಹಾಗೆ ನಾನು ಬರೆದ ಮೊದಲ ಕಂತಿನ ನಾಲ್ಕು ಕೃತಿಗಳು ಇವು. ಒಂದು; ಬೆಳ್ಳಾರೆ ಸಮೀಪದ ತಿರುಮಲೇಶ್ವರ ಭಟ್ಟರ ಕೃಷಿ ಪ್ರಯೋಗ ಶಾಲೆ, ನಂದನವನ. ತಿರುಮಲೇಶ್ವರ ಭಟ್ಟರು ಈ ದೇಶದ ಭಾಗಶಃ ಕೃಷಿಕರ ಹಾಗೆ ಮೌನಿ. ಆದರೆ ಗಂಭೀರ ಪ್ರಯೋಗಶೀಲರು. ತನ್ನ ತುಂಡುಭೂಮಿ ಒಂದು ಆಶ್ರಮದ ರೀತಿ, ಒಂದು ಪ್ರವಾಸಿ ತಾಣವಾಗಬೇಕೆಂದು ಕೇವಲ ಆಲಂಕಾರಿಕ ಗಿಡ ಕಲ್ಲು ಕುಂಡ ಕಳ್ಳಿಗಳಷ್ಟೇ ಅಲ್ಲ, ದೇಶ ವಿದೇಶದ 300-400 ಹಣ್ಣಿನ ಗಿಡಗಳು ಅವರ ತೋಟದಲ್ಲಿವೆ . ರಬ್ಬರ್ – ಅಡಿಕೆಯಂತಹ ವಾಣಿಜ್ಯ ಕೃಷಿಯನ್ನು ಕೂಡ ಹೊಸ ಬಗೆಯಲ್ಲಿ ಪ್ರಯೋಗಕ್ಕೆ ಹಾನಿಗೊಳಿಸಿದವರು ತಿರುಮಲೇಶ್ವರ ಭಟ್ಟರು. ಇವರ ಬಗ್ಗೆ ನಾನು ಬರೆದ ಕೃತಿಯೇ ‘ನಂದನವನ’.

ಎರಡನೆಯ ಪುಸ್ತಕ ಮಂಜೇಶ್ವರ ಸಮೀಪದ ಮೀಯಪದವಿನ ಚಂದ್ರಶೇಖರ ಚೌಟರದ್ದು. ಚಂದ್ರಶೇಖರ ಚೌಟರದ್ದು ಭಾಗಶಃ ಜಂಬಿಟ್ಟಿಗೆ ಮಣ್ಣಿನ ಮೇಲಿನ ಕಠಿಣ ಕೃಷಿ ಪ್ರಯೋಗ. ಅವಕಾಡೊ, ತೆಂಗು, ರಂಬುಟಾನ್, ಅಡಿಕೆ, ಡ್ರ್ಯಾಗನ್ ಫ್ರೂಟ್ ಇತ್ಯಾದಿ ಕೃಷಿಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಸಿ ಯಶಸ್ವಿಯಾದವರು. ಕರಾವಳಿ ಮಲೆನಾಡಿನಲ್ಲಿ 30 – 40 ವರ್ಷಗಳ ಹಿಂದೆಯೇ ಎಳೆನೀರನ್ನು ಕೊಯ್ದು ರಸ್ತೆ ಬದಿಯಲ್ಲಿಟ್ಟು ಮಾರಾಟ ಮಾಡಿ ಗೆದ್ದವರು. ಪೆಪ್ಸಿಕೋಲದಂತಹ ನವ ನಾಗರಿಕ ಪೇಯದ ಎದುರು ನಾಟಿ ಬೊಂಡವನ್ನು ಯಶಸ್ವಿಯಾಗಿ ಮಾರಾಟ ಮಾಡಿ ಜನಪ್ರಿಯಗೊಳಿಸಿದವರು. ಈ ಕೃಷಿಕ ಕೂಡು ಕುಟುಂಬದಲ್ಲಿ ಇವತ್ತಿಗೂ ಅಣ್ಣ ತಮ್ಮಂದಿರು ಹಂಚಿಕೊಂಡು ದುಡಿದು ಬಂದ ಆದಾಯವನ್ನು ಹಾಗೆಯೇ ಹಂಚಿಕೊಂಡು ಒಗ್ಗಟ್ಟಿನಿಂದ ಬದುಕುತ್ತಾರೆ. ಈ ಮನೆ ಕೃಷಿ, ಮನಸ್ಸು ಪುಸ್ತಕದಲ್ಲಿ ದಾಖಲಾಗಿದೆ.

ಮೂರನೇ ಪುಸ್ತಕ ‘ಮನಮೋಹನ ಜೇನೇ ಜೀವನ’. ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಸಮೀಪದ ಆರಂಬ್ಯದ ಮನಮೋಹನರಿಗೆ ಇನ್ನೂ 40 ತುಂಬಿಲ್ಲ. ಸುಮಾರು ಮೂರು ಸಾವಿರಕ್ಕಿಂತ ಹೆಚ್ಚು ಜೇನು ಕುಟುಂಬವನ್ನು ಸಾಕುವ ಇವರು ವರ್ಷಕ್ಕೆ 20 ಲಕ್ಷಕ್ಕಿಂತ ಹೆಚ್ಚು ಆದಾಯ ಪಡೆಯುತ್ತಾರೆ. ಈ ಕಾರಣಕ್ಕೆ ಮನು ನಮ್ಮ ದೇಶದ ಎಷ್ಟೋ ನಿರುದ್ಯೋಗಿ ಯುವಕರಿಗೆ ಮಾದರಿ. ಜೇನು ಕುಟುಂಬವನ್ನು ಕರ್ನಾಟಕ – ಕೇರಳದ ಹತ್ತಾರು ರೈತರ ತೋಟಗಳಲ್ಲಿ ಇಟ್ಟು ಸಸ್ಯ ಫಲವಂತಿಗೆಗೂ ಚೋಧಕವಾಗಿ ನಿರ್ವಹಿಸುವ ಈ ಯುವಕನ ಸಾಧನೆ ‘ಮನಮೋಹನ – ಜೇನೇ ಜೀವನ’ ಎನ್ನುವ ಪುಸ್ತಕದಲ್ಲಿ ದಾಖಲಾಗಿದೆ.

ನಾಲ್ಕನೆಯ ಪುಸ್ತಕ ಕರಾವಳಿಗೆ ಅಥವಾ ಕರ್ನಾಟಕಕ್ಕೆ ಮೊಟ್ಟಮೊದಲ ಬಾರಿಗೆ ರಂಬುಟನ್ ಮ್ಯಾಂಗೋ ಸ್ಟೀನ್ ನಂತಹ ಅಪರೂಪದ ಹಣ್ಣುಗಳನ್ನು ವಿದೇಶದಿಂದ ತಂದು ಪರಿಚಯಿಸಿದ ಮತ್ತು ಮೊದಲ ಬಾರಿಗೆ ಈ ಭಾಗದಲ್ಲಿ ಅನಾನಸು ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದ ಅಪರೂಪದ ಸಾಧಕ ಎಲ್.ಸಿ. ಸೋನ್ಸ್ ಅವರದು. ‘ಸೋನ್ಸ್ ಫಾರ್ಮ್’ ಮೂಡುಬಿದಿರೆ- ಕಾರ್ಕಳ ರಸ್ತೆಯಲ್ಲಿದ್ದು ಇವತ್ತಿಗೂ ಪ್ರತಿದಿನ ನೂರಾರು ದೇಶ- ವಿದೇಶಿ ರೈತ ಪ್ರವಾಸಿಗರನ್ನು ಆಕರ್ಷಿಸುವ ಒಂದು ಕೇಂದ್ರವಾಗಿದೆ. ಗಿಡ ಉತ್ಪಾದಿಸುವ, ಹಣ್ಣುಗಳನ್ನು ನೇರವಾಗಿ ಮಾರುವ, ಮೌಲ್ಯವರ್ಧಿಸುವ ಈ ಕೇಂದ್ರ ಈ ದೇಶದ ಅನೇಕ ಹೊಸ ರೈತರಿಗೆ ಮಾದರಿಯಾಗಿದೆ. ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ 50 ವರ್ಷಗಳ ಹಿಂದೆಯೇ ಸಸ್ಯಶಾಸ್ತ್ರದಲ್ಲಿ ಪಿಎಚ್ಡಿ ಮಾಡಿದ ಸೋನ್ಸ್ ಅವರ ತೋಟ ಬೇರೆ ಬೇರೆ ಕಾರಣಗಳಿಗೆ ಈವರೆಗೆ ಲಕ್ಷಾಂತರ ಜನರ ಗಮನ ಸೆಳೆದಿದೆ. ಇವರು ತೋಟದ ಒಳಗಡೆ ಒಟ್ಟಾಗಿಸಿದ ಕೃಷಿ ಪರಿಕರದ ಮ್ಯೂಸಿಯಂ ಗಮನ ಸೆಳೆಯುವ ಮತ್ತೊಂದು ಆಕರ್ಷಣೆ. ಇಂತಹ ಫಾರ್ಮ್ ನಿರ್ಮಾತ್ಮರ ಕೃಷಿ ಯಶೋಗಾಥೆ ಈ ಪುಸ್ತಕದ ಒಳಗಡೆ ದಾಖಲಾಗಿದೆ. ಮುಂದಿನ ಎರಡು ಸಂಚಿಕೆಗಳು ಸಿದ್ಧಗೊಳ್ಳುತ್ತವೆ. 200 ಕ್ಕಿಂತ ಹೆಚ್ಚು ಭತ್ತದ ತಳಿ ಉಳಿಸಿದ ಮಿತ್ತ ಬಾಗಿಲು ದೇವರಾಯರದ್ದು ಹಾಗೂ ಅಡಿಕೆಯ ಬಗ್ಗೆ ಯಾವ ವಿಶ್ವವಿದ್ಯಾನಿಲಯ ಅಕಾಡಮಿಯ ಸಹಾಯವೂ ಇಲ್ಲದೆ ನಿರಂತರ ಸಂಶೋಧನೆ ಮಾಡುತ್ತಿರುವ ಬದಲಾಜೆ ಶಂಕರ ಭಟ್ಟರದ್ದು. ಮುಂದೆ ನಾನು ದಾಖಲಿಸುವುದು, ಹೆಜ್ಜೆ ಇಡುವುದು ಉತ್ತರ ಕರ್ನಾಟಕ, ಮಲೆನಾಡು ಶಿವಮೊಗ್ಗ ಚಿಕ್ಕಮಗಳೂರು ಕಡೆಗೆ.

LEAVE A REPLY

Please enter your comment!
Please enter your name here