Home ಕರ್ನಾಟಕ ನಾಸಿರ್ ಸಜಿಪ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ದಂಡ

ನಾಸಿರ್ ಸಜಿಪ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ದಂಡ

3
0

ಮಂಗಳೂರು, ಎ.30: ಬಂಟ್ವಾಳ ತಾಲೂಕು ಸಜಿಪ ಮೂಡ ಗ್ರಾಮದ ಕೊಳಕೆ ಕಂದೂರು ಎಂಬಲ್ಲಿ ಕೋಮುದ್ವೇಷದಿಂದ ಹಲ್ಲೆ ನಡೆದು ಮಹಮ್ಮದ್ ನಾಸಿರ್ ಎಂಬವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರೂ. ದಂಡ ವಿಧಿಸಿದೆ.

ಬಂಟ್ವಾಳ ತಾಲೂಕು ಮಂಚಿ ಗ್ರಾಮದ ವಿಜೇತ್ ಕುಮಾರ್ (22), ಅಭಿ ಯಾನೇ ಅಭಿಜಿತ್ (24) ಮಂಗಳೂರು ತಾಲೂಕು ಬಡಗ ಉಳಿಪ್ಪಾಡಿ ಗ್ರಾಮದ ಮಳಲಿ ಮಟ್ಟಿಮನೆ ಕಿರಣ್ ಪೂಜಾರಿ (24), ತಿರುವೈಲು ಗ್ರಾಮದ ಅನೀಶ್ ಯಾನೆ ಧನು (23) ಶಿಕ್ಷೆಗೊಳಗಾದವರು.

ಪ್ರಕರಣದ ವಿವರ

2015ರ ಆಗಸ್ಟ್ 6ರಂದು ಮೊಹಮ್ಮದ್ ಮುಸ್ತಫಾ ಅವರು ಮಾವನ ಹೆಂಡತಿಯನ್ನು ಆಟೋ ರಿಕ್ಷಾದಲ್ಲಿ ಬಿಟ್ಟು ಹಿಂದೆ ಬರುತ್ತಿರುವಾಗ ಮೆಲ್ಕಾರ್ ಬಳಿ ನಾಸಿರ್ ಅವರು ಹೆಂಡತಿ ಮನೆಗೆ ಹೋಗುವ ಉದ್ದೇಶದಿಂದ ಆಟೋ ಹತ್ತಿದ್ದಾರೆ. ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಆಟೋ ಹೋಗುತ್ತಿದ್ದಾಗ ನಾಲ್ವರು ಆರೋಪಿಗಳು ಆಟೋದಲ್ಲಿರುವುದು ಮುಸ್ಲಿಂ ವ್ಯಕ್ತಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಬೊಳ್ಳಾಯಿಗೆ ಹೋಗುವ ರಸ್ತೆ ಕುರಿತು ವಿಚಾರಿಸಿದ್ದಾರೆ. ಆಟೋ ಚಾಲಕನಿಂದ ಮಾಹಿತಿ ಪಡೆದು ಬೈಕ್‌ನಲ್ಲಿ ಆಟೋವನ್ನು ಹಿಂಬಾಲಿಸಿದ್ದರು ಎನ್ನಲಾಗಿದೆ.

ರಾತ್ರಿ 10-45ಕ್ಕೆ ಬಂಟ್ವಾಳ ತಾಲೂಕು ಸಜಿಪ ಮೂಡ ಗ್ರಾಮದ ಕೊಳಕೆ ಕಂದೂರು ಎಂಬಲ್ಲಿಗೆ ತಲುಪುತ್ತಿದ್ದಂತೆ ಓವರ್ ಟೇಕ್ ಮಾಡಿ ರಿಕ್ಷಾವನ್ನು ತಡೆದು ನಿಲ್ಲಿಸಿ, ದಾರಿಕೇಳುವ ನೆಪವೊಡ್ಡಿ 1ನೇ ಆರೋಪಿ ವಿಜೇತ್ ಕುಮಾರ್ ಕೈಯಲ್ಲಿದ್ದ ತಲವಾರಿನಿಂದ ರಿಕ್ಷಾ ಚಾಲಕ ಮುಸ್ತಾಫ ಅವರ ಕೈಗೆ ಮತ್ತು ಎದೆಗೆ ಬಲವಾಗಿ ಕಡಿದು ಹಲ್ಲೆ ನಡೆಸಿದ್ದಾನೆ. 2ನೇ ಆರೋಪಿ ಕಿರಣ್ ಪೂಜಾರಿ ಪ್ರಯಾಣಿಕರ ಸೀಟ್‌ನಲ್ಲಿ ಕುಳಿತಿದ್ದ ನಾಸಿರ್‌ಗೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದಾನೆ. ತೀವ್ರ ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ನಾಸಿರ್ ಅವರು ಆ.7ರಂದು ಮೃತಪಟ್ಟಿದ್ದರು.

ಈ ನಾಲ್ವರು ಕೃತ್ಯದ ವೇಳೆ ಧರಿಸಿದ್ದ ರಕ್ತತಾಗಿದ ಬಟ್ಟೆಗಳನ್ನು ಪಾಣೆಮಂಗಳೂರು ನೇತ್ರಾವತಿ ನದಿಗೆ ಎಸೆದು ಪರಾರಿಯಾಗಿರುವುದಾಗಿ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹಲ್ಲೆಗೆ ಪ್ರತೀಕಾರ: ವಿಜೇತ್ ಕುಮಾರ್ ಮತ್ತು ಅಭಿ ಯಾನೇ ಅಭಿಜಿತ್ ಮೇಲೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡ್ ಗ್ರಾಮದ ಆಲಬೆ ಎಂಬಲ್ಲಿ ಆ.5ರಂದು ರಾತ್ರಿ 10:45ರ ವೇಳೆಗೆ ನಾಲ್ಕೈದು ಮಂದಿ ಹಲ್ಲೆ ನಡೆಸಿದ್ದರು. ಇದರಿಂದ ಮನಸ್ತಾಪಗೊಂಡ ಅವರು ಮರುದಿನವೇ ಮುಸ್ಲಿಂ ಸಮುದಾಯದ ಯುವಕರನ್ನು ಕೊಲೆ ಮಾಡಬೇಕು ಎನ್ನುವ ಸಂಚು ರೂಪಿಸಿದ್ದರು. ಅದರಂತೆ ಗೆಳೆಯರಾದ ಕಿರಣ್ ಮತ್ತು ಅನೀಶ್ ಅವರನ್ನು ಆ.6ರ ರಾತ್ರಿ ಪಾಣೆಮಂಗಳೂರಿನ ನರಹರಿಬೆಟ್ಟಕ್ಕೆ ಹೋಗುವ ರಸ್ತೆಯ ಬಳಿ ಕರೆಸಿಕೊಂಡು ಒಳಸಂಚು ರೂಪಿಸಿರುವುದಾಗಿ ಆರೋಪಿಗಳು ತಿಳಿಸಿದ್ದರು.

ಪ್ರಕರಣದ ತನಿಖಾಧಿಕಾರಿಯಾಗಿದ್ದ ಕೆ.ಯು.ಬೆಳ್ಳಿಯಪ್ಪ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಪ್ರಕರಣದಲ್ಲಿ ಒಟ್ಟು 29 ಸಾಕ್ಷಿದಾರರನ್ನು ವಿಚಾರಿಸಲಾಗಿದ್ದು, 40 ದಾಖಲೆಗಳನ್ನು ಗುರುತಿಸಲಾಗಿದೆ. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ವಾದ- ಪ್ರತಿವಾದವನ್ನು ಆಲಿಸಿ, ದೋಷಿಗಳೆಂದು ತೀರ್ಪು ನೀಡಿದ್ದಾರೆ.

ನ್ಯಾಯಾಧೀಶರು ಅಪರಾಧಿಗಳಿಗೆ ಐಪಿಸಿ ಕಲಂ 302, ಸಹವಾಚಕ ಕಲಂ 120 (ಬಿ)ಯಡಿ ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ. ದಂಡ ಪಾವತಿಸಲು ವಿಫಲರಾದರೆ 1 ವರ್ಷ ಸಾದಾ ಸಜೆ. ಕಲಂ 307 ಮತ್ತು ಸಹವಾಚಕ ಕಲಂ120 (ಬಿ)ಯಡಿ 5 ವರ್ಷ ಕಠಿಣ ಸಜೆ ಮತ್ತು ತಲಾ 5 ಸಾವಿರ ರೂ. ದಂಡ. ದಂಡ ಪಾವತಿಸುವಲ್ಲಿ ವಿಫಲನಾದರೆ 6 ತಿಂಗಳ ಸಾದಾ ಸಜೆ. ಕಲಂ 341 ಮತ್ತು ಸಹವಾಚಕ ಕಲಂ120 (ಬಿ)ಯಡಿ 1ತಿಂಗಳ ಸಾದಾ ಸಜೆ, ಕಲಂ 324, ಸಹವಾಚಕ ಕಲಂ 120 (ಬಿ)ಯಡಿ 1 ವರ್ಷ ಸಾದಾಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತ 1.20 ಲಕ್ಷ ರೂ.ವನ್ನು ಮೃತ ನಾಸಿರ್ ಅವರ ಪತ್ನಿಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತ ಪರಿಹಾರ ಯೋಜನೆಯಡಿ ಮೃತರ ಹೆಂಡತಿ ಮತ್ತು ಗಾಯಾಳು ಮುಸ್ತಾಫ ಅವರಿಗೆ ಪರಿಹಾರ ನೀಡಬೇಕು ಎಂದು ತೀರ್ಪಿನಲ್ಲಿ ನಿರ್ದೇಶನ ನೀಡಿದೆ.

ಸರಕಾರದ ಪರವಾಗಿ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here