Home Uncategorized ನಿರ್ಲಕ್ಷಿತ ದಲಿತರ ಉನ್ನತ ಕೃಷಿ ಶಿಕ್ಷಣ; ಸರಕಾರದಿಂದ ಒಲಿಯದ ಫೆಲೋಷಿಪ್ ಭಾಗ್ಯ

ನಿರ್ಲಕ್ಷಿತ ದಲಿತರ ಉನ್ನತ ಕೃಷಿ ಶಿಕ್ಷಣ; ಸರಕಾರದಿಂದ ಒಲಿಯದ ಫೆಲೋಷಿಪ್ ಭಾಗ್ಯ

11
0

ಸಂವಿಧಾನದ 4ನೇ ಭಾಗದ, 46ನೇ ವಿಧಿಯು, ರಾಜ್ಯದ ದುರ್ಬಲ ವರ್ಗಗಳ ವಿಶೇಷವಾಗಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಜನತೆಯ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಜಾಗರೂಕತೆಯಿಂದ ವೃದ್ಧಿಸಿಕೊಳ್ಳತಕ್ಕದ್ದು ಮತ್ತು ಅವರನ್ನು ಸಾಮಾಜಿಕ ಅನ್ಯಾಯದಿಂದ ಮತ್ತು ಎಲ್ಲಾ ರೀತಿಯ ಶೋಷಣೆಗಳಿಂದ ಸಂರಕ್ಷಿಸತಕ್ಕದ್ದು ಎಂದು ಹೇಳುತ್ತದೆ. ಅಂಬೇಡ್ಕರ್ರವರು ಸಹ ಪುಣೆಯಲ್ಲಿ ನಡೆದ ದಲಿತ ವಿದ್ಯಾರ್ಥಿಗಳ ವಾರ್ಷಿಕ ಸಾಮಾಜಿಕ ಸಮ್ಮೇಳನವನ್ನು ಉದ್ದೇಶಿಸಿ ದಲಿತ ವಿದ್ಯಾರ್ಥಿಗಳ ಕರ್ತವ್ಯದ ಮೇಲೆಯೇ ದಲಿತರ ಭವಿಷ್ಯ ಅವಲಂಬಿಸಿದೆ ಎಂದು ನುಡಿದಿದ್ದರು.

ಆದರೆ ರಾಜ್ಯ ಸಮಾಜ ಕಲ್ಯಾಣ ಇಲಾಖೆಗೆ ಸಂವಿಧಾನದ ಶೈಕ್ಷಣಿಕ ಆಶಯಗಳನ್ನು ಕಾಪಾಡುವ ಅಂತಃಕರಣ ಸತ್ತುಹೋಗಿದೆ ಎಂದು ಕಾಣುತ್ತದೆ. ಕಾರಣ ದಶಕಗಳಿಂದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಯಾವುದೇ ಫೆಲೋಷಿಪ್ ಇಲ್ಲದೆಯೆ ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಹೆಣಗುತ್ತಿರುವ ದಲಿತ ವಿದ್ಯಾರ್ಥಿಗಳು.

ಹೌದು, ಒಬ್ಬ ದಲಿತ ವಿದ್ಯಾರ್ಥಿಗೆ ಫೆಲೋಷಿಪ್ ಅಥವಾ ವಿದ್ಯಾರ್ಥಿವೇತನ ಎಷ್ಟು ಮುಖ್ಯ ಎಂದರೆ ಅದು ಒಬ್ಬ ವ್ಯಕ್ತಿಯನ್ನು ದೇಶದ ದಿಕ್ಕನ್ನೇ ಬದಲಿಸುವ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಉದಾಹರಣೆಗೆ ಡಾ.ಬಿ.ಆರ್.ಅಂಬೇಡ್ಕರ್. ಅದೇ ಫೆಲೋಷಿಪ್ ದಲಿತ ವಿದ್ಯಾರ್ಥಿಗೆ ದೊರೆಯದ ಹಾಗೆ ಮಾಡಿದಾಗ ವಿದ್ಯಾರ್ಥಿಯು ಜೀವವನ್ನು ತೊರೆಯುವ ಹಂತಕ್ಕೂ ತಲುಪಬಹುದು. ಉದಾಹರಣೆಗೆ 2016 ರಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆಗೆ ಶರಣಾದ ರೋಹಿತ್ ವೇಮುಲನ ಸಾಂಸ್ಥಿಕ ಕೊಲೆ.

ಕೇಂದ್ರ ಸರಕಾರದ ರಾಜ್ಯ ಶಿಕ್ಷಣ ಸಚಿವರಾದ ಸುಭಾಷ್ ಸರಕಾರ್ರವರು ಡಿಸೆಂಬರ್ನ 2023ರ ಚಳಿಗಾಲದ ಪಾರ್ಲಿಮೆಂಟ್ನ ಅಧಿವೇಶನದಲ್ಲಿ ಒದಗಿಸಿದ ಲಿಖಿತ ಮಾಹಿತಿಯಲ್ಲಿ ದೇಶದ ಪ್ರತಿಷ್ಠಿತ ಉನ್ನತ ವಿದ್ಯಾಸಂಸ್ಥೆಗಳಾದ ಐಐಎಂ ಮತ್ತು ಐಐಟಿಗಳಿಂದ 2018 ರಿಂದ ಇಲ್ಲಿಯವರೆಗೂ ಸುಮಾರು 13,626 ಹಿಂದುಳಿದ ಮತ್ತು ದಲಿತ ವಿದ್ಯಾರ್ಥಿಗಳು ಮಧ್ಯಂತರವಾಗಿ ಶಿಕ್ಷಣವನ್ನು ಮೊಟಕುಗೊಳಿಸಿರುವುದು ಬಹಿರಂಗ ಪಡಿಸಿದ್ದಾರೆ. ಇದು ದೇಶದ ಕುತಂತ್ರಿತ ಚಾತುರ್ವಣ ಶೈಕ್ಷಣಿಕ ವ್ಯವಸ್ಥೆಗೆ ಮುನ್ನುಡಿ. ದಿನನಿತ್ಯ ಫೆಲೋಷಿಪ್ ನೀಡಲು ನೂರಾರು ಅಡತಡೆಗಳು ಮತ್ತು ಕಿರುಕುಳ ನೀಡುವ ಶಿಕ್ಷಣ ಸಂಸ್ಥೆಗಳಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳು ಶಿಕ್ಷಣ ಮುಂದುವರಿಸುವುದು ಕನಸಿನ ಮಾತು.

ಈ ಮಧ್ಯೆ ಎನ್ಡಿಎ ನೇತೃತ್ವದ ಕೇಂದ್ರ ಶಿಕ್ಷಣ ಸಚಿವಾಲಯವು ಐಐಟಿಗಳ ನೇಮಕಾತಿಯಲ್ಲಿ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಪಾಲಿಸಲು ರಚಿಸಿರುವ ಸಮಿತಿಯು ಮೀಸಲಾತಿಯಿಂದ ಶಿಕ್ಷಣ ಮತ್ತು ಸಂಸ್ಥೆಯ ಗುಣಮಟ್ಟ ಕುಸಿಯುತ್ತಿದ್ದು, ಐಐಟಿಗಳಿಗೆ ಮೀಸಲಾತಿಯಿಂದ ವಿನಾಯಿತಿ ನೀಡಬೇಕೆಂಬ ಅಂಶವನ್ನು ವರದಿಯಲ್ಲಿ ದಾಖಲಿಸಿದೆ! ಇಂತಹ ಮನುವಾದಿ ಸರಕಾರಗಳಿಂದ ಬಹುಜನರಿಗೆ ಸದುದ್ದೇಶದ ಫೆಲೋಷಿಪ್ ನಿರೀಕ್ಷಿಸಲಾಗುತ್ತದೆಯೇ?.

2005-06ನೇ ಸಾಲಿನಿಂದ ಕೇಂದ್ರ ಸರಕಾರವು ಪರಿಶಿಷ್ಟ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಎಂ.ಫಿಲ್. ಮತ್ತು ಪಿಎಚ್.ಡಿ. ಪದವಿಗಳಲ್ಲಿ ಓದುತ್ತಿರುವ ದಲಿತ ವಿದ್ಯಾರ್ಥಿಗಳಿಗೆ ರಾಜೀವ್ ಗಾಂಧಿ ನ್ಯಾಷನಲ್ ಫೆಲೋಷಿಪ್ನ್ನು ನೀಡುತ್ತಿತ್ತು. ಈ ಸೌಲಭ್ಯವು 2010 ರಿಂದ ಅಲ್ಪಸಂಖ್ಯಾತರಿಗೆ, 2012ರಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಸಿಗುತ್ತಿದೆ. ಕೇವಲ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನಾ ವಿಷಯದ ಪ್ರಾಮುಖ್ಯತೆಯ ಮೇಲೆ ದೇಶದಾದ್ಯಂತ ಸುಮಾರು 2,000 ದಲಿತ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) ವಿದ್ಯಾರ್ಥಿಗಳಿಗೆ ಫೆಲೋಷಿಫ್ ದೊರೆಯುತ್ತಿತ್ತು.

2017-18ರಲ್ಲಿ ಕೇಂದ್ರ ಸರಕಾರವು ವಿದ್ಯಾರ್ಥಿಗಳು ಫೆಲೋಷಿಪ್ ಪಡೆಯಲು, ಸಹಾಯಕ ಪ್ರಾಧ್ಯಾಪಕ ವೃತ್ತಿಗೆ ಅರ್ಹತೆಯನ್ನು ಪಡೆಯಲು ರೂಪಿಸಿರುವ ಯುಜಿಸಿ ನೆಟ್ ಪರೀಕ್ಷೆ ಅಥವಾ ಯುಜಿಸಿ ಸಿಐಎಸ್ಆರ್ ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಎಂಬ ಅರ್ಹತೆಯನ್ನು ಹೊಸದಾಗಿ ತಂದೊಡ್ಡಿತು. ಪರಿಣಾಮ ಬಹಳಷ್ಟು ದಲಿತ ವಿದ್ಯಾರ್ಥಿಗಳು ಫೆಲೋಷಿಪ್ ವಂಚಿತರಾಗಿದ್ದಾರೆ, ಅದರಲ್ಲಿ ಪ್ರಮುಖವಾಗಿ ಕೃಷಿ ಪಿಎಚ್.ಡಿ. ವಿದ್ಯಾರ್ಥಿಗಳು ಅಧಿಕವಾಗಿದ್ದಾರೆ. ಹಾಗಾಗಿ ಕೃಷಿ ರಂಗದ ದಲಿತ ವಿದ್ಯಾರ್ಥಿಗಳು ಪದವಿಯನ್ನು ಮುಗಿಸಲು ಬಹಳಷ್ಟು ತೊಂದರೆಗೆ ಈಡಾಗಿದ್ದಾರೆ.

ಕರ್ನಾಟಕ ಸರಕಾರವು 2015-16ನೇ ಸಾಲಿನಿಂದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾಸಿಕ ಫೆಲೋಷಿಪ್ ನೀಡುತ್ತಿದ್ದು, ಇದರ ಜೊತೆಗೆ ಯುಜಿಸಿ ಫೆಲೋಷಿಪ್ ಸಹ ಲಭ್ಯವಿರುವುದು ಸ್ವಾಗತಾರ್ಹ. ಇದೇ ಸೌಲಭ್ಯವನ್ನು ರಾಜ್ಯದ ಪಾರಂಪರಿಕ ವಿಶ್ವವಿದ್ಯಾನಿಲಯಗಳಾದ ಬೆಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗಾ ಮತ್ತು ಇತರ ಸರಕಾರಿ ವಿಶ್ವವಿದ್ಯಾನಿಲಯಗಳು ಸ್ನಾತಕೋತ್ತರ ದಲಿತ ವಿದ್ಯಾರ್ಥಿಗಳಿಗೆ ದಶಕಗಳಿಂದ ಒದಗಿಸುತ್ತಿವೆ. ಆದರೆ ರಾಜ್ಯದ ಕೃಷಿ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿಗಳು ಎಷ್ಟು ಬಾರಿ ತಮಗೂ ಫೆಲೋಷಿಪ್ ನೀಡುವಂತೆ ಮನವಿ ಸಲ್ಲಿಸಿದರೂ ಸರಕಾರದಿಂದ ಯಾವುದೇ ಸ್ಪಂದನೆ ಇರುವುದಿಲ್ಲ. ಬಹುಶಃ ದಲಿತ ಮತ್ತು ಕೃಷಿಯಡೆಗಿನ ಉದಾಸೀನತೆ ಮನಸ್ಥಿತಿಯೇ ಇದಕ್ಕೆ ಕಾರಣ.

ರಾಜ್ಯದಲ್ಲಿರುವ ಬೆಂಗಳೂರು ವಿಶ್ವವಿದ್ಯಾನಿಲಯ, ಮೈಸೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳು ತಮ್ಮಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ. ವಿದ್ಯಾಭ್ಯಾಸ ಮಾಡುವ ದಲಿತ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 21,000 ರಿಂದ 35,000ರ ವರೆಗೂ ಫೆಲೋಷಿಪ್ ನೀಡುತ್ತಾರೆ. ಆದರೆ ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳ ದಲಿತ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷವಾದ ಫೆಲೋಷಿಪ್ ಲಭ್ಯವಿರುವುದಿಲ್ಲ. ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕ ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿ ಭಾರತದಲ್ಲಿರುವ ಅನೇಕ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಒಂದು ತಿಂಗಳ ಅಧ್ಯಯನ ಪ್ರವಾಸ ಕೈಗೊಳ್ಳುತ್ತಾರೆ. ಇದಕ್ಕೆ ಪ್ರತೀ ವಿದ್ಯಾರ್ಥಿಗೆ ತಗಲುವ ವೆಚ್ಚ ಸುಮಾರು ರೂ. 50,000. ಆದರೆ ಕೃಷಿ ವಿಶ್ವವಿದ್ಯಾನಿಲಯಗಳು ದಲಿತ ಅಭ್ಯರ್ಥಿಗಳಿಗೆ ನೀಡುವ ಸಹಾಯ ಧನ ಕೇವಲ ರೂ. 5,000 ಮಾತ್ರ. ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಅಹವಾಲನ್ನು ವಿಶ್ವವಿದ್ಯಾನಿಲಯ ಮತ್ತು ಸರಕಾರದ ಮುಂದೆ ಹೇಳಿಕೊಂಡರೂ ಇದುವರೆಗೂ ಯಾವುದೇ ಸ್ಪಂದನೆ ಇರುವುದಿಲ್ಲ.

2023ರ ಡಿಸೆಂಬರ್ನ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ತಮ್ಮ ಸರಕಾರವು 2013-2018ರ ಅವಧಿಯಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ/ಗಿರಿಜನ ಉಪಯೋಜನೆಗೆ ರೂ. 82,000 ಕೋಟಿಯನ್ನು ದಲಿತರ ಕಲ್ಯಾಣಕ್ಕೆ ಮೀಸಲಿರಿಸಿತ್ತು ಎಂದು ನುಡಿದಿದ್ದಾರೆ. ಅಲ್ಲದೆ, ಪ್ರತೀ ವರ್ಷ ರಾಜ್ಯ ಸರಕಾರ ಸುಮಾರು 20 ಸಾವಿರ ಕೋಟಿ ರೂ. ಬಜೆಟ್ ಹಣವನ್ನು ದಲಿತರ ಕಲ್ಯಾಣಕ್ಕಾಗಿ ಮೀಸಲಿಡುತ್ತದೆ. ಇದರಲ್ಲಿ ಬಹುತೇಕ ಹಣವನ್ನು ನಿಗದಿತ ಸಮಯದಲ್ಲಿ ಸಮುದಾಯಗಳಿಗೆ ಖರ್ಚು ಮಾಡಲು ಆಗುತ್ತಿಲ್ಲ ಎಂಬುದನ್ನು ದಿನನಿತ್ಯ ಪತ್ರಿಕೆಗಳಲ್ಲಿ ಗಮನಿಸುತ್ತಿದ್ದೇವೆ. ಇದರಲ್ಲಿ ಶೇ.1ರಷ್ಟು ಬಜೆಟನ್ನು ನಿರ್ಲಕ್ಷಿತ ದಲಿತರ ಉನ್ನತ ಕೃಷಿ ಶಿಕ್ಷಣಕ್ಕೆ (ಎಂ.ಎಸ್ಸಿ. ಮತ್ತು ಪಿಎಚ್.ಡಿ) ಮೀಸಲಿಟ್ಟರೂ ಸರಕಾರದಿಂದ ಒಂದು ಅದ್ಭುತವಾದ ಫೆಲೋಷಿಪನ್ನು ದಲಿತ ಕೃಷಿ ವಿಜ್ಞಾನಿ ‘ರಾಗಿ ತಳಿ ಬ್ರಹ್ಮ’ ರಾಗಿ ಲಕ್ಷ್ಮಣಯ್ಯನವರ ಹೆಸರಿನಲ್ಲಿ ಶೋಷಿತ ಸಮುದಾಯಕ್ಕೆ ಘೋಷಿಸಬಹುದಾಗಿದೆ.

ಆದ್ದರಿಂದ ಸರಕಾರವು, ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಎಲ್ಲಾ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯಗಳ ಕುಲಪತಿಗಳನ್ನು ಒಳಗೊಂಡ ಒಂದು ಸಭೆಯನ್ನು ನಡೆಸಿ ಕೃಷಿ ಶಿಕ್ಷಣದಲ್ಲಿ ದಲಿತ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಆಲಿಸಿ ಕೂಡಲೇ ಪರಿಷ್ಕರಿಸುವ ಕ್ರಮ ಕೈಗೊಳ್ಳಬೇಕು. ರಾಜ್ಯದ ಇತರ ವಿವಿಗಳಂತೆ ಸ್ನಾತಕೋತ್ತರ ಕೃಷಿ ಶಿಕ್ಷಣದಲ್ಲಿರುವ ದಲಿತ ವಿದ್ಯಾರ್ಥಿಗಳಿಗೂ ಉತ್ತಮ ಫೆಲೋಷಿಪನ್ನು ಕಾನೂನಾತ್ಮಕವಾಗಿ ಒದಗಿಸಿ ಕೃಷಿ ಮತ್ತು ದಲಿತರ ಶಿಕ್ಷಣ ಎರಡನ್ನು ಕಾಪಾಡಿಕೊಳ್ಳಬೇಕು.

– ಡಾ. ರಮೇಶ ವಿ. ಸಂಶೋಧನಾ ಸಹಾಯಕರು ತೋಟಗಾರಿಕೆ ಕಾಲೇಜು, ಬೆಂಗಳೂರು

LEAVE A REPLY

Please enter your comment!
Please enter your name here