Home Uncategorized ಪಕ್ಷದ ವಿಪ್ ಉಲ್ಲಂಘಿಸಿ ಅನರ್ಹಗೊಂಡಿದ್ದರೆ ಉಪಚುನಾವಣೆಗೆ ಸ್ಪರ್ಧಿಸಲು ಅಡ್ಡಿಯಿಲ್ಲ: ಹೈಕೋರ್ಟ್

ಪಕ್ಷದ ವಿಪ್ ಉಲ್ಲಂಘಿಸಿ ಅನರ್ಹಗೊಂಡಿದ್ದರೆ ಉಪಚುನಾವಣೆಗೆ ಸ್ಪರ್ಧಿಸಲು ಅಡ್ಡಿಯಿಲ್ಲ: ಹೈಕೋರ್ಟ್

5
0

ಬೆಂಗಳೂರು: ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದಲ್ಲಿ ಅನರ್ಹಗೊಂಡ ಸ್ಥಳೀಯ ಸಂಸ್ಥೆಯ ಸದಸ್ಯರು ಮುಂಬರುವ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿರ್ಬಂಧವಿರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.

ವಿಪ್ ಉಲ್ಲಂಘನೆ ಆರೋಪದಲ್ಲಿ ಅನರ್ಹಗೊಂಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರಸಭೆ ಸದಸ್ಯ ಮೊಹಮ್ಮದ್ ಶಫಿಕ್ ಅವರ ನಾಮಪತ್ರ ಸ್ವೀಕರಿಸಿದ್ದ ಚುನಾವಣಾಧಿಕಾರಿಯ ಕ್ರಮ ಪ್ರಶ್ನಿಸಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ ಎಂಬವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಸಂವಿಧಾನದ ಪರಿಚ್ಛೇದ 191(1)ರ ಪ್ರಕಾರ ಒಬ್ಬ ವ್ಯಕ್ತಿ ಸದಸ್ಯರಾಗಿ ಆಯ್ಕೆಯಾಗಲು ಅನರ್ಹಗೊಂಡಲ್ಲಿ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ಅವಕಾಶವಿರುವುದಿಲ್ಲ. ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿರುವಂತೆ 191(2)ರ ಅಡಿಯಲ್ಲಿ ಅನರ್ಹಗೊಂಡರೆ ಅದು ಸದಸ್ಯತ್ವಕ್ಕೆ ಮಾತ್ರ ಅನ್ವಯವಾಗಲಿದೆ. ಅಂತಹ ವ್ಯಕ್ತಿ ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಆಯ್ಕೆಗೊಳ್ಳುವುದಕ್ಕೆ ನಿರ್ಬಂಧ ವಿರುವುದಿಲ್ಲ ಎಂದು ತಿಳಿಸಿದೆ.

ಆದರೆ, ಪರಿಚ್ಛೇದ 191(2)ರ ಪ್ರಕಾರ ಹತ್ತನೇ ಅನುಸೂಚಿಯ ಅಡಿಯಲ್ಲಿ ಸದಸ್ಯ ಸ್ಥಾನದಿಂದ ಅನರ್ಹಗೊಂಡಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತರನ್ನಾಗಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿತು.

ಪ್ರಕರಣವೇನು?: ನಗರಸಭೆ ಸದಸ್ಯ ಸ್ಥಾನಕ್ಕೆ 2023ರ ಡಿ.27ರಂದು ನಿಗದಿಯಾಗಿದ್ದ ಉಪಚುನಾವಣೆಗೆ ಶಫೀಕ್ ನಾಮಪತ್ರ ಸಲ್ಲಿಸಿದ್ದರು. ಈ ನಾಮಪತ್ರವನ್ನು ಚುನಾವಣಾಧಿಕಾರಿ 2023ರ ಡಿ.16ರಂದು ಅಂಗೀಕರಿಸಿದ್ದರು. ಇದನ್ನು ಪ್ರಶ್ನಿಸಿದ್ದ ಮುನೇಗೌಡ, ಶಫಿಕ್ ಅವರು ವಿಪ್ ಉಲ್ಲಂಘನೆ ಆರೋಪದಲ್ಲಿ ಅನರ್ಹಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಚುನಾವಣಾಧಿಕಾರಿಗಳಿಗೆ ಕೋರಿದ್ದರು. ಮುನೇಗೌಡರ ಮನವಿಯನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಸಂಬಂಧ ವಿಚಾರಣೆ ವೇಳೆ ಅರ್ಜಿದಾರ ಮುನೇಗೌಡ ಪರ ವಕೀಲರು, ಶಫೀಕ್ ಅವರನ್ನು ಅನರ್ಹಗೊಳಿಸಿರುವುದರಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಬೇಕು ಎಂದು ವಾದ ಮಂಡಿಸಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಶಫೀಕ್ ಪರ ವಕೀಲರು, ಸಂವಿಧಾನದ 10ನೇ ಅನುಸೂಚಿಯಡಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ಡಿಯಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್ ಕೂಡಾ ಸ್ಪಷ್ಟಪಡಿಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

LEAVE A REPLY

Please enter your comment!
Please enter your name here