Home ಕರ್ನಾಟಕ ಬೆಂಗಳೂರು | ಓಮಿನಿ ವ್ಯಾನ್ ಬೆಂಕಿಗಾಹುತಿ : ಬಾಲಕಿ ಸಜೀವ ದಹನ, 7 ಮಂದಿಗೆ ಗಾಯ

ಬೆಂಗಳೂರು | ಓಮಿನಿ ವ್ಯಾನ್ ಬೆಂಕಿಗಾಹುತಿ : ಬಾಲಕಿ ಸಜೀವ ದಹನ, 7 ಮಂದಿಗೆ ಗಾಯ

47
0

ಬೆಂಗಳೂರು : ಹಿಂದಿನಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಓಮಿನಿ ವ್ಯಾನ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ. 14 ವರ್ಷದ ಬಾಲಕಿ ಸಜೀವ ದಹನವಾಗಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಮಾದಾವರ ಬಳಿ ವರದಿಯಾಗಿದೆ.

ದಾಸನಪುರ ನಿವಾಸಿ ದಿವ್ಯಾ(14) ಮೃತ ಬಾಲಕಿ. ಘಟನೆಯಲ್ಲಿ ಮಹೇಶ್, ತರುಣ್, ಶಾಂತಿಲಾಲ್, ಸುನೀತಾ, ಮಂಜುಳಾ, ಮಯಾಂಕ್, ನಮನ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಉತ್ತರ ಭಾರತ ಮೂಲದ ಶಾಂತಿಲಾಲ್ ಕುಟುಂಬ 10 ವರ್ಷಗಳ ಹಿಂದೆ ದಾಸನಪುರಕ್ಕೆ ಬಂದು ನೆಲೆಸಿತ್ತು. ಎ.21ರ ರವಿವಾರ ಬೆಳಗ್ಗೆ ಅಬ್ಬಿಗೆರೆಗೆ ಕಾರ್ಯಕ್ರಮ ನಿಮಿತ್ತ ಇಡೀ ಕುಟುಂಬ ಓಮಿನಿ ವ್ಯಾನ್‍ನಲ್ಲಿ ತೆರಳಿತ್ತು. ಮಧ್ಯರಾತ್ರಿ ವಾಪಸ್ ದಾಸನಪುರಕ್ಕೆ ಬರುವಾಗ ಮಾರ್ಗಮಧ್ಯೆ ಮಾದಾವರ ಬಳಿ ಅತೀ ವೇಗವಾಗಿ ಬಂದ ಬಲೆನೊ ಕಾರು ಓಮಿನಿಗೆ ಢಿಕ್ಕಿ ಹೊಡಿದಿದೆ. ಪರಿಣಾಮ ವ್ಯಾನ್ ಪಲ್ಟಿ ಆಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಈ ವೇಳೆ 7 ಜನ ವ್ಯಾನ್‍ನಿಂದ ಹೊರ ಬಿದ್ದು ಪ್ರಾಣ ಉಳಿಸಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ದಿವ್ಯಾ ಸಂಪೂರ್ಣ ದಹನವಾಗಿದ್ದಾಳೆ. ಗಾಯಾಳುಗಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಲೆನೊ ಕಾರು ಚಾಲಕ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಈ ಘಟನೆ ಸಂಬಂಧ ನೆಲಮಂಗಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here