ಬೆಂಗಳೂರು: ಮುಂದಿನ ಬಾರಿಯೂ ನಮ್ಮದೇ ಪಕ್ಷದ ಸರಕಾರ ಕೇಂದ್ರದಲ್ಲಿ ರಚನೆ ಆಗಲಿದ್ದು, ಆಗ ಭ್ರಷ್ಟಚಾರಿಗಳನ್ನು ಮುಂದೆಯೂ ಜೈಲಿಗೆ ಹಾಕುವ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವಕ್ಕೆ ಏನೂ ಆಗಿಲ್ಲ. ಭ್ರಷ್ಟಾಚಾರಿಗಳನ್ನು ಬಚಾವ್ ಮಾಡಲು ಇಂಡಿಯಾ ಒಕ್ಕೂಟ ಇಲ್ಲಸಲ್ಲದ ಆರೋಪ ಮಾಡಿದ್ದಾರೆ.ಆದರೆ, ಭ್ರಷ್ಟಾಚಾರಿಗಳನ್ನು ಜೈಲಿಗೆ ಕಳುಹಿಸಿದ್ದೇವೆ. ಮುಂದೆಯೂ ಕಳುಹಿಸಲಿದ್ದೇವೆ ಎಂದು ತಿಳಿಸಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.60ರಷ್ಟು ಮತದೊಂದಿಗೆ 28ಕ್ಕೆ 28 ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಗೆಲ್ಲಿಸಿ. ಪ್ರಧಾನಿ ಮೋದಿ ಅವರ ಸಂದೇಶ, ಕೆಲಸ, ಕಾಂಗ್ರೆಸ್ಸಿನ ಅಭಿವೃದ್ಧಿ ಶೂನ್ಯತೆ-ಭ್ರಷ್ಟಾಚಾರ ಕುರಿತು ಮನೆಮನೆಗೆ ಮಾಹಿತಿ ತಲುಪಿಸಿ.ಅಲ್ಲದೆ, 2014ರಲ್ಲಿ ಬಿಜೆಪಿಗೆ ಶೇ.43 ಮತದೊಂದಿಗೆ 17 ಕ್ಷೇತ್ರ, 2019ರಲ್ಲಿ ಶೇ.51ಮತದೊಂದಿಗೆ 25 ಕ್ಷೇತ್ರದಲ್ಲಿ ಗೆಲ್ಲಿಸಿದ್ದೀರಿ. ಒಂದೆಡೆ ಪ್ರಧಾನಿ ಮೋದಿ ಇದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ಮತ್ತು ಪ್ರಧಾನಮಂತ್ರಿ ಆಗಿರುವಾಗ ಅವರ ಮೇಲೆ ಭ್ರಷ್ಟಾಚಾರದ ಆರೋಪವೇ ಇರಲಿಲ್ಲ. ಇನ್ನೊಂದೆಡೆ 12 ಲಕ್ಷ ಕೋಟಿಯ ಭ್ರಷ್ಟಚಾರದ ಕೂಟ ಇಂಡಿಯಾ ಇದೆ ಎಂದು ಅವರು ಟೀಕಿಸಿದರು.
ಕರ್ನಾಟಕದ ಜನರು ಭ್ರಷ್ಟಾಚಾರಿಗಳನ್ನು ಇಷ್ಟಪಡುವುದಿಲ್ಲ. ಆದರೆ, 12 ಲಕ್ಷ ಕೋಟಿಯ ಹಗರಣ ಮಾಡಿದವರು ಇಂಡಿ ಒಕ್ಕೂಟದಲ್ಲಿದ್ದಾರೆ. ಬಡವರು, ವಂಚಿತರು, ಮಹಿಳೆಯರು, ಯುವಜನರಿಗಾಗಿ ವಿವಿಧ ಜನಪರ ಯೋಜನೆಗಳನ್ನು ಮೋದಿ ಜಾರಿಗೊಳಿಸಿದ್ದಾರೆ ಎಂದ ಅವರು, ರಾಜ್ಯದ ಅಭಿವೃದ್ಧಿ ಕಡೆ ಕಾಂಗ್ರೆಸ್ ಗಮನ ಕೊಡುತ್ತಿಲ್ಲ. ಕುರ್ಚಿ ಉಳಿಸಿಕೊಳ್ಳಲು ಸಿಎಂ ಪ್ರಯತ್ನ ನಡೆಸಿದರೆ, ಕುರ್ಚಿ ಕಸಿದುಕೊಳ್ಳಲು ಇತರರು ಪ್ರಯತ್ನ ಮಾಡುತ್ತಿದ್ದಾರೆ. ಯುಪಿಎ 10 ವರ್ಷಗಳಲ್ಲಿ ಕರ್ನಾಟಕಕ್ಕೆ 1,42,000 ಕೋಟಿ ಕೊಟ್ಟರೆ, ನಾವು 10 ವರ್ಷಗಳಲ್ಲಿ 4,91,000 ಕೋಟಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಬಿಜೆಪಿ 10 ವರ್ಷಗಳಲ್ಲಿ ಭ್ರಷ್ಟಾಚಾರ ಆರೋಪ ಇಲ್ಲದ ಅಭಿವೃದ್ಧಿಪರ ಆಡಳಿತ ನೀಡಿದೆ. ಆರ್ಥಿಕವಾಗಿ 12ನೆ ಸ್ಥಾನದಲ್ಲಿದ್ದ ಭಾರತ ಇದೀಗ ಜಗತ್ತಿನ 5ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 20 ಲಕ್ಷ ಕೋಟಿಗೂ ಹೆಚ್ಚು ಅನುದಾನವನ್ನು ಮೂಲಸೌಕರ್ಯ ಹೆಚ್ಚಳಕ್ಕೆ ಪ್ರಧಾನಿ ಅವರ ಸರಕಾರ ನೀಡಿದೆ ಎಂದರು.
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಬರಗಾಲ, ಅಭಿವೃದ್ಧಿ ರಹಿತ ಸ್ಥಿತಿಯಿಂದ ಕಾಂಗ್ರೆಸ್ ವಿರೋಧಿ ಅಲೆ ಇದೆ. ನಾವು ಪ್ರಯತ್ನಶೀಲರಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಜತೆಗೆ, ಪ್ರಧಾನಿ ಮೋದಿ ಅವರು ಮತ್ತೊಮ್ಮೆ ರಾಜ್ಯಕ್ಕೆ ಪ್ರವಾಸ ಬರಲಿದ್ದಾರೆ ಎಂದು ಹೇಳಿದರು.
ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಪ್ರಧಾನಿ ಮೋದಿ ನಮ್ಮ ಅಭ್ಯರ್ಥಿ ಎಂದು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಿ. ಬಿಜೆಪಿ-ಜೆಡಿಎಸ್ ಪಕ್ಷಗಳ ಎಲ್ಲ 28 ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್, ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರದಂತೆ ಮೊದಲಾದವರು ಭಾಗವಹಿಸಿದ್ದರು.